ಸೋಮಶೇಖರ ಅಭಿಮತ ರಾಮದುರ್ಗದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ನೇಕಾರ ಸಮುದಾಯದ ವಿದ್ಯಾರ್ಥಿಗಳಿಗೆ ರಾಮದುರ್ಗದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಿ.ಎಸ್.ಸೋಮಶೇಖರ, ಮಲ್ಲಣ್ಣ ಯಾದವಾಡ, ಶಂಕ್ರಣ್ಣ ಮುರುಡಿ, ಗಜಾನನ ಗುಂಜೇರಿ, ಗೋಪಾಲ ಪಾತಾಳಿ, ಹಷಿಕೇಶ ಕುಲಕರ್ಣಿ ಇತರರಿದ್ದರು. 
ಬೆಳಗಾವಿ

ಯಾರೂ ಕಸಿದುಕೊಳ್ಳದ ಸಂಪತ್ತು ಜ್ಞಾನ

ಅರ್ಚನಾ ಜಾಧವ
ರಾಮದುರ್ಗ: ಮನುಷ್ಯ ಗಳಿಸಿದ ಆಸ್ತಿ, ಅಂತಸ್ತು ಹೋಗಬಹುದು. ಆದರೆ, ಪಡೆದ ಜ್ಞಾನ ಹಾಗೂ ಸಂಪಾದಿಸಿದ ಅನುಭವವನ್ನು ಎಂದಿಗೂ ಕಳೆದುಕೊಳ್ಳಲಾರ ಎಂದು ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ ಹೇಳಿದರು.
ನಗರದ ಬಣಕಾರ ಪೇಟೆಯ ಬನಶಂಕರಿ ಸಮುದಾಯ ಭವನದಲ್ಲಿ ತಾಲೂಕು ನೇಕಾರ ಸಮುದಾಯಗಳ ಒಕ್ಕೂಟದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ನೇಕಾರ ಸಮುದಾಯದ ಮಕ್ಕಳು ಸಾಧನೆಗೈದ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಬಡ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸನ್ನದ್ಧರಾಗಬೇಕು. ಅಂತಹವರಿಗೆ ಸಮುದಾಯದಿಂದ ಆರ್ಥಿಕ ಸಹಾಯ ಮಾಡಲಾಗುವುದು ಎಂದರು.
ಹಿಂದುಳಿದ ವರ್ಗದಲ್ಲಿ ನೇಕಾರ ಸಮುದಾಯ ಎರಡನೇ ಸ್ಥಾನದಲ್ಲಿದ್ದರೂ, ರಾಜಕೀಯ ಪ್ರಾತಿನಿಧ್ಯದಲ್ಲಿ ಹಿಂದೆ ಬಿದ್ದಿರುವುದು ಖೇದಕರ ಸಂಗತಿ. ನೇಕಾರ ಅಭಿವದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ನೇಕಾರರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಮಾತನಾಡಿ, ಮಕ್ಕಳನ್ನು ಮೊಬೈಲ್, ಟಿವಿಯಿಂದ ದೂರವಿಟ್ಟು, ಪಾಲಕರು ಭವಿಷ್ಯದ ಉನ್ನತಿಗೆ ಶ್ರಮಿಸಬೇಕು. ಪ್ರತಿ ವರ್ಷ ನಡೆಯುವ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಈರಮ್ಮ ಯಾದವಾಡ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯ ನೀಡಲಾಗುವುದು ಎಂದರು.
ರಾಜ್ಯದೇವಾಂಗ ಸಂಘದ ಉಪಾಧ್ಯಕ್ಷ ಶಂಕರಣ್ಣ ಮುರುಡಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗಜಾನನ ಗುಂಜೇರಿ, ಉಪಾಧ್ಯಕ್ಷ ಗೋಪಾಲ ಪಾತಾಳಿ, ಹಷಿಕೇಶ ಕುಲಕರ್ಣಿ, ಒಕ್ಕೂಟದ ತಾಲೂಕು ಅಧ್ಯಕ್ಷ ನಾರಾಯಣ ಹೂಲಿ, ವಿನೋದ ಕರದಿನ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿದ ನೇಕಾರ ಸಮುದಾಯದ 76ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾ ಕಾರ್ಯದರ್ಶಿ ರಾಜು ಕೋಪರ್ಡೆ, ಬನಶಂಕರಿ ದೇವಸ್ಥಾನ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಏಕನಾಥ ಕೊಣ್ಣೂರ, ದಿನೇಶ ಗಿಡ್ನಂದಿ, ವಿನಾಯಕ ಕಾಮಕರ, ಲೋಹಿತ ಮೋರಕರ, ಬಸವರಾಜ ಢವಳಿ ಇತರರಿದ್ದರು. ಎಂ.ಎ.ಮುನವಳ್ಳಿ ಸ್ವಾಗತಿಸಿದರು. ಟಿ.ಜಿ.ಕರದಿನ ನಿರೂಪಿಸಿದರು. ಸುರೇಶ ಬಲಕುಂದಿ ವಂದಿಸಿದರು.