ಅಥಣಿಯ ಕೆಎಲ್‌ಇ ಸಂಸ್ಥೆಯ ಸ್ವತಂತ್ರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಹಾಂತೇಶ ಕವಟಗಿಮಠ, ಮಹೇಶ ಕುಮಠಳ್ಳಿ, ಡಾ.ಮಲ್ಲಿಕಾರ್ಜುನ ಹಂಜಿ, ಸಿದರಾಯ ಭೋಸಗಿ, ಶ್ರೀನಿವಾಸ ಕನಪರ್ತಿ ಇತರರಿದ್ದರು. 
ಬೆಳಗಾವಿ

ಗುಣಮಟ್ಟದ ಶಿಕ್ಷಣ ನೀಡುವುದೇ ಕೆಎಲ್‌ಇ ಗುರಿ

ಅಥಣಿ: ಕಾಯಕ ಮತ್ತು ದಾಸೋಹಕ್ಕೆ ಹೆಸರಾಗಿರುವ ಅಥಣಿ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಆಶೀರ್ವಾದದಿಂದ ಹಾಗೂ ದಾನಿಗಳ ಕೊಡುಗೆಯಿಂದ ಕೆಎಲ್‌ಇ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಕೆಎಲ್‌ಇ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಳಗಾವಿ ಜಿಲ್ಲೆಗೆ ಅಥಣಿ ಆದರ್ಶವಾಗಿದ್ದು, ಇಲ್ಲಿಯ ವಿದ್ಯಾರ್ಥಿಗಳಿಗೆ ದೊಡ್ಡ ನಗರಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣನ ಜತೆ ನೀಟ್, ಜೆಇಇ ತರಬೇತಿ ನೀಡುವ ಉದ್ದೇಶದಿಂದ ಸ್ವತಂತ್ರ ವಿಜ್ಞಾನ ವಿಭಾಗ ಕೋರ್ಸ್ ಆರಂಭಿಸಿದ್ದೇವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಅದರಂತೆ ಐಐಟಿ ಮತ್ತು ಮೆಡಿಕಲ್ ವಿಭಾಗಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಸೇರಬೇಕು ಎಂದು ಕರೆ ನೀಡಿದರು.
ನುರಿತ ಉಪನ್ಯಾಸಕರು, ಹೈಟೆಕ್ ಸೌಲಭ್ಯಗಳು ಇಲ್ಲಿವೆ. ಹೊಸದಾಗಿ ಪ್ರತ್ಯೇಕ ಸ್ವತಂತ್ರ ವಿಜ್ಞಾನ ವಿಭಾಗದ 37 ಪಿಯು ಕಾಲೇಜು ಆರಂಭಿಸಿದ್ದೇವೆ ಎಂದರು. ಮೊಬೈಲ್ ಬಳಕೆಯಿಂದ ಅಪರಾಧ ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ತಂಬಾಕು, ಗುಟ್ಖಾ, ಡ್ರಗ್ಸ್ ವ್ಯಸನಕ್ಕೆ ಬಲಿಯಾಗುತ್ತಿದ್ದು, ಪಾಲಕರು, ಶಿಕ್ಷಕರು ಮತ್ತು ಸಮಾಜ ಗಮನಿಸಿ ಅವರನ್ನು ತಿದ್ದಬೇಕು ಎಂದು ಹೇಳಿದರು.
ತಹಸೀಲ್ದಾರ್ ಸಿದರಾಯ ಭೋಸಗಿ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿ ಗುರಿ ಮುಖ್ಯವಾಗಿದ್ದು, ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಇಲ್ಲಿ ಎಲ್ಲ ರೀತಿ ಸೌಲಭ್ಯವಿದ್ದು, ಈಗಾಗಲೇ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಮಹನೀಯರ ತ್ಯಾಗ, ಪರಿಶ್ರಮ, ದಾನಿಗಳ ಕೊಡುಗೆಯಿಂದ ಕೆಎಲ್‌ಇ ಸಂಸ್ಥೆ ಬೆಳೆದಿದೆ. ಅದಕ್ಕೆ ಡಾ.ಪ್ರಭಾಕರ ಕೋರೆ ಮತ್ತಷ್ಟು ಮೆರುಗು ನೀಡಿದ್ದು, ಕಡಲಾಚೆ ಶಿಕ್ಷಣ, ಆರೋಗ್ಯ ಕ್ಷೇತ್ರ ವಿಸ್ತರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಎಲ್‌ಇ ಸಂಸ್ಥೆ ತನ್ನ ಹೆಗ್ಗುರುತು ಮೂಡಿಸಿದೆ ಎಂದರು. ಸಾಧಕ ವಿದ್ಯಾರ್ಥಿಗಳು ಹಾಗೂ ಡಾ.ಎಂ.ಜಿ.ಹಂಜಿಯನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಹೇಶ ಕುಮಠಳ್ಳಿ, ಪ್ರಾಚಾರ್ಯರಾದ ಪ್ರಶಾಂತ ಮಗದುಮ್ಮ, ಶ್ರೀನಿವಾಸ ಕನಪರ್ತಿ, ಮಲ್ಲಿಕಾರ್ಜುನ, ರೇಷ್ಮಾ ಇನಾಮದಾರ, ಶಂಭುಲಿಂಗ ಮಮದಾಪುರ, ವಿಜಯಕುಮಾರ ಬುರ್ಲಿ, ಪ್ರಕಾಶ ಪಾಟೀಲ, ಅಶೋಕ ಬುರ್ಲಿ, ಶ್ರೀಶೈಲ ಸಂಕ, ಶಿವಶಂಕರ ಹಂಜಿ ಇತರರಿದ್ದರು.