ಅಂಕಲಿ ಗ್ರಾಮದ ಕೆಎಲ್‌ಇ ಅಂಗ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಶ್ರದ್ಧಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಸುರೇಶ ಪಾಟೀಲ ಇತರರಿದ್ದರು.
- ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ ಅನಿಸಿಕೆ
- ವಿವಿಧೆಡೆ ೧೧೦ನೇ ಸಂಸ್ಥಾಪನಾ ದಿನ ಆಚರಣೆ
ಮಾಂಜರಿ: ಭೌತಿಕವಾಗಿ ಹಚ್ಚಿದ ದೀಪ ಆರಬಹುದು.ಕೆಎಲ್‌ಇ ಸಂಸ್ಥೆ ಕಟ್ಟಿದ ಸಪ್ತರ್ಷಿಗಳು ಹಚ್ಚಿದ ಅಕ್ಷರದ ಹಣತೆ ನಿರಂತರ ಬೆಳಗುತ್ತಿರುತ್ತದೆ ಎಂದು ಸದಲಗಾ ಪಟ್ಟಣದ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಪ್ರೌಢಶಾಲೆ, ಎಸ್.ಸಿ.ಪಾಟೀಲ ಕನ್ನಡ ಮಾಧ್ಯಮ ಶಾಲೆ, ಬಸಪ್ರಭು ಕೋರೆ ಆಂಗ್ಲ ಮಾಧ್ಯಮ ಶಾಲೆ, ಪದವಿಪೂರ್ವ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ೧೧೦ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಎಲ್‌ಇ ಸಂಸ್ಥೆ ಸಂಸ್ಥಾಪಕರು
ಇಂದು ನಮ್ಮ ಜತೆ ಭೌತಿಕವಾಗಿ ಇಲ್ಲದಿದ್ದರೂ ಅವರ ಸದಾಶಯ ನಮಗೆಲ್ಲ ಮಾರ್ಗದರ್ಶಿ ಆಗಿರುತ್ತದೆ. ಬೆಲ್ಲದ ಪುತ್ಥಳಿ ಕೈಯಲ್ಲಿ ಹಿಡಿದು ಎಲ್ಲಿ ಚುಂಬಿಸಿದರೂ ಇನಿದಹುದು ಎಂಬ ಅಲ್ಲಮಪ್ರಭುವಿನ ವಚನದ ಸಾರದಂತೆ ಕೆಎಲ್‌ಇ ಸಂಸ್ಥೆಯಲ್ಲಿ ಎಲ್ಲ ಬಗೆಯ ಕೋರ್ಸ್ಗಳು ಲಭ್ಯ ಇವೆ ಎಂದರು.
ಸುರೇಶ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ೧೯೧೬ರಲ್ಲಿ ಬರಗಾಲ ಆವರಿಸಿದ ಸಂದರ್ಭದಲ್ಲಿ ಎಂ.ಆರ್.ಸಾಖರೆ, ಶಿ.ಶಿ.ಬಸವನಾಳ, ಬಿ.ಬಿ.ಮಮದಾಪುರ, ಎಚ್.ಎಫ್.ಕಟ್ಟಿಮನಿ, ಪಂಡಿತಪ್ಪ ಚಿಕ್ಕೋಡಿ, ಬಿ.ಎಸ್.ಹಂಚಿನಾಳ ಮತ್ತು ಸರದಾರ ವಿ.ವಿ.ಪಾಟೀಲರು ಈ ಭಾಗಕ್ಕೆ ಅಕ್ಷರದ ದೀಕ್ಷೆ ಕೊಡಲು ಶಾಲೆ ತೆರೆದರು ಎಂದು ಹೇಳಿದರು.
ತುಕಾರಾಮ ಪಾಟೀಲ ಮಾತನಾಡಿ, ಸಮಾಜದಲ್ಲಿರುವ ಎಲ್ಲರಿಗೂ ಶಿಕ್ಷಣ ದೊರೆಯಲಿ ಎಂದು ಸಪ್ತರ್ಷಿಗಳು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಸಪ್ತ ಋಷಿಗಳ ತ್ಯಾಗ ಮತ್ತು ಡಾ.ಪ್ರಭಾಕರ ಕೋರೆ ಅವರ ಛಲದಿಂದ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಪಡೆದುಕೊಂಡಿದೆ. ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದರು. ಜ್ಯೋತಿ ತಮ್ಮಗೌಡ ಸ್ವಾಗತಿಸಿದರು. ಮಡಿವಾಳ ನಿರೂಪಿಸಿದರು.