ಸುಟ್ಟಟ್ಟಿ ಗ್ರಾಮದಲ್ಲಿ ಕರಿಸಿದ್ಧೇಶ್ವರ ಭಂಡಾರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ಭಂಡಾರದಲ್ಲಿ ಮಿಂದೆದ್ದರು. 
ಬೆಳಗಾವಿ

ಕರಿಸಿದ್ಧೇಶ್ವರ ಭಂಡಾರ ಜಾತ್ರೆ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಪಲ್ಲಕ್ಕಿ ಉತ್ಸವ ಅದ್ದೂರಿ
  • ದೇವರಿಗೆ ವಿಶೇಷ ಪೂಜೆ ಸಲ್ಲಿಕೆ
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಕರಿಸಿದ್ಧೇಶ್ವರ ಭಂಡಾರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ ಕರಿಸಿದ್ಧೇಶ್ವರ ಗದ್ದುಗೆಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಸೀಮಿಲಕ್ಕವ್ವ ದೇವಸ್ಥಾನ ಹಾಗೂ ಗ್ರಾಮದ ಎಲ್ಲ ಬಡಾವಣೆಗಳಲ್ಲಿ ತಳಿರು-ತೋರಣಗಳಿಂದ ಸಿಂಗರಿಸಿ, ರಂಗೋಲಿ ಬಿಡಿಸಿ ೨೫ ಗ್ರಾಮಗಳಿಂದ ಆಗಮಿಸಿದ ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕರಿಸಿದ್ಧೇಶ್ವರ ದೇವಸ್ಥಾನದಿಂದ ಗ್ರಾಮದ ಹೊರವಲಯದಲ್ಲಿರುವ ಸೀಮಿಲಕ್ಕವ್ವ ದೇವಸ್ಥಾನಕ್ಕೆ ಎಲ್ಲ ಪಲ್ಲಕ್ಕಿ ಬರಮಾಡಿಕೊಂಡು ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತೆರಳಲಾಯಿತು. ಅಲಗಮೇಳ, ಮೃದಂಗ ವಾದ್ಯಗೋಷ್ಠಿ, ಸ್ಥಳೀಯ ಕಲಾವಿದರ ತಮಟೆ ಮೆರವಣಿಗೆಗೆ ರಂಗು ತಂದಿತು. ಭಕ್ತರು ಹಾಗೂ ಯುವಕರ ತಂಡ ಭಂಡಾರದೋಕುಳಿಯಲ್ಲಿ ಮಿಂದೆದ್ದರು.
ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ನಡೆಯಿತು. ಸಂಜೆ ಕಲಾಪ್ರದರ್ಶನ ಜರುಗಿದವು. ಅರ್ಚಕ ಬಸವರಾಜ ಪೂಜಾರಿ, ಮುಖಂಡರಾದ ಶಿವಪ್ಪ ಅರ್ಜುಣಗಿ, ವಸಂತ ಚವ್ಹಾಣ, ಸದಾಶಿವ ಯಂಗಾರೆ, ರಾಮಪ್ಪ ಅಜ್ಜಣಗಿ, ಹೂವಪ್ಪ ಸವದಿ, ಮುದಕ ಕರಜಗಿ, ಲಕ್ಷ್ಮಣ ಯಲ್ಲಮಗುಡಿ, ಶಿದ್ದಪ್ಪ ಕೊರಪ್ಪಗೋಳ, ಶಿವಪ್ಪ ಪೂಜಾರಿ, ಸಾಬು ಸವದಿ, ಮಾಯಪ್ಪ ಸನದಿ ಇತರರಿದ್ದರು.