ಬಿಜೆಪಿಯ ಪ್ರೀತಿ ಕಾಮಕರ, ಉಪಮೇಯರ್ ಆಗಿ ಹಣಮಂತ ಕೊಂಗಾಲಿ ಚುನಾಯಿತ
ಬೆಳಗಾವಿ :ಇಲ್ಲಿ ಮಹಾನಗರ ಪಾಲಿಕೆಯ 24ನೇ ಅವಧಿಯಲ್ಲಿ ಅಪ್ಪಟ ಕನ್ನಡಿಗರಾದ ಮೇಯರ್ ಆಗಿ ಬಿಜೆಪಿಯ ಪ್ರೀತಿ ಕಾಮಕರ, ಉಪಮೇಯರ್ ಆಗಿ ಹಣಮಂತ ಕೊಂಗಾಲಿ ಚುನಾಯಿತರಾಗುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದರು.
ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆ ವೇಳೆ ಮೇಯರ್ ಸ್ಥಾನಕ್ಕೆ 21ನೇ ವಾರ್ಡಿನ ಬಿಜೆಪಿ ಸದಸ್ಯೆ ಪ್ರೀತಿ ಹಾಗೂ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಸದಸ್ಯೆ ಖುರ್ಷಿದಾ ದಾದಾಪೀರ್ ಮುಲ್ಲಾ ನಾಮಪತ್ರ ಸಲ್ಲಿಸಿದರು. ಪ್ರೀತಿ ಪರವಾಗಿ 39 ಹಾಗೂ ವಿರೋಧವಾಗಿ 18 ಮತಗಳು ಬಂದವು. ಖರ್ಷಿದಾ ಪರವಾಗಿ 29 ಹಾಗೂ ವಿರೋಧವಾಗಿ 39 ಮತಗಳು ಬಂದವು. 10 ಮತಗಳ ಅಂತರದಿಂದ ಪ್ರೀತಿ ಮೇಯರ್ ಆಗಿ ಗೆಲವು ಸಾಧಿಸಿದರು.
ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಪುರುಷ ವರ್ಗಕ್ಕೆ ಮೀಸಲಾಗಿತ್ತು. ಹೀಗಾಗಿ ಆಡಳಿತ ಮತ್ತಿ ವಿರೋಧ ಪಕ್ಷದಿಂದ ಮೇಯರ್, ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಒಟ್ಟು ಶಾಸಕರು, ಸಂಸದರು, ಎಂಎಲ್‌ಸಿ ಸೇರಿ 65 ಸದಸ್ಯರ ಬಲ ಹೊಂದಿದೆ. ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಸಂಸದರಾದ ಜಗದೀಶ ಶೆಟ್ಟರ್, ಪ್ರೀಯಾಂಕಾ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಸೇರಿ 6 ಮಂದಿ ಗೈರಾದರು. ಮೇಯರ್ ಮತದಾನ ವೇಳೆ ಇಬ್ಬರು ತಟಸ್ಥವಾಗಿ ಉಳಿದರು. ಉಪಮೇಯರ್‌ಗೆ ಎಲ್ಲರೂ ಮತ ಚಲಾಯಿಸಿದರು ಎಂದು ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಘೋಷಣೆ ಮಾಡಿದರು.
ಮೇಯರ್, ಉಪಮೇಯರ್ ಆಯ್ಕೆ ಘೋಷಿಸಿದ ಬಳಿಕ ಎಲ್ಲ ಸದಸ್ಯರು ಟೇಬಲ್ ಕುಟ್ಟಿ ಹರ್ಷ ವ್ಯಕ್ತಪಡಿಸಿದರು. ಆಡಳಿತ ಬಿಜೆಪಿ ಸದಸ್ಯರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಮೊಳಗಿಸಿದರು. ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಬಿಜೆಪಿ ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಅನಿಲ ಬೆನಕೆ ಕೂಡ ಹಾಜರಿದ್ದು ಶುಭಾಶಯ ಕೋರಿದರು.
..............................