ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸಂತೋಷ ಯಕ್ಕುಂಡಿ, ಪಿ.ಎನ್.ಪಾಟೀಲ, ಮೋಹನ ಪಾಟೀಲ, ಮಂಜುಳಾ ಶೆಟ್ಟರ, ಪ್ರೇಮಕ್ಕ ಅಂಗಡಿ ಇತರರಿದ್ದರು. 
ಬೆಳಗಾವಿ

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆಯ ಪ್ರತೀಕ

ಪ್ರೊ.ಡಾ.ಸಂತೋಷ ಯಕ್ಕುಂಡಿ ಹೇಳಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಎಚ್.ವಿ.ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಕಸಾಪ112ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದ ನೆಲ, ಜಲ, ನಾಡು, ನುಡಿ ಹಾಗೂ ಸಂಸ್ಕೃತಿ ಸಂರಕ್ಷಿಸುವ ಸದುದ್ದೇಶದಿಂದ ಸ್ಥಾಪಿತ ಪರಿಷತ್ತು ಇಂದು ಲಕ್ಷಾಂತರ ಸದಸ್ಯರನ್ನು ಹೊಂದಿದೆ. ಸಾಹಿತ್ಯ ಸಮ್ಮೇಳನ, ವಿಚಾರ ಗೋಷ್ಠಿ ಸೇರಿದಂತೆ ಮುಂತಾದ ಕಾರ್ಯಗಳ ಮೂಲಕ ಸಾಹಿತಿಗಳಿಗೆ ಉತ್ತೇಜನ ನೀಡುವ ಪರಿಷತ್ತು ಕನ್ನಡದ ಅಸ್ಮಿತೆಯ ಪ್ರತೀಕವಾಗಿದೆ ಎಂದರು.
ಪ್ರಾಚಾರ್ಯ ಪಿ.ಎನ್.ಪಾಟೀಲ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಮ್ಮೆಲ್ಲರ ಹೆಮ್ಮೆಯಾಗಿದೆ. ಕನ್ನಡಕ್ಕಾಗಿ ಎಲ್ಲರೂ ಒಗ್ಗೂಡಿ ಕನ್ನಡದ ತೇರನ್ನು ಎಳೆಯೋಣ ಎಂದರು. ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿ, ಕಸಾಪ ಸಂವರ್ಧನೆಗೊಳಿಸುವಲ್ಲಿ ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ ಅಪಾರವಾಗಿದೆ ಎಂದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ತಾಜೀನ್ ಸಂಗೊಳ್ಳಿ, ಸಾಕ್ಷಿ ನೇಸರಗಿ, ನಿಸರ್ಗ ಹುದ್ದಾರ, ರವಿ ಗೋಡಿ, ಶ್ರೇಯಾ ಹೂಲಿಮಠ, ದೀಪಾ ಲಕ್ಕುಂಡಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮೋಹನ ಪಾಟೀಲ,
ತಾಲೂಕು ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ, ಪದಾಧಿಕಾರಿಗಳಾದ ಪ್ರೇಮಕ್ಕ ಅಂಗಡಿ, ಶ್ರೀಕಾಂತ ಉಳ್ಳೇಗಡ್ಡಿ, ಲಕ್ಷ್ಮೀ ಮುಗಡ್ಲಿಮಠ ಹಾಗೂ ಎಂ.ಎಸ್.ಪಟ್ಟಣಶೆಟ್ಟಿ, ಡಿ.ಬಿ.ನರಗುಂದ, ಪದ್ಮಶ್ರೀ ಪಾಟೀಲ, ಸುನೀಲ ಬಾಳಿ ಇತರರಿದ್ದರು. ಸಂದೀಪ ಹೆದ್ದೂರಿ ಪ್ರಾರ್ಥಿಸಿದರು. ಸೈದುಸಾಬ್ ದಬಾಡಿ ಸ್ವಾಗತಿಸಿದರು. ಪವಿತ್ರಾ ಪಚ್ಚೇದಾರ ವಂದಿಸಿದರು. ಸಂತೋಷ ಹಡಪದ, ರಾಜು ಹಕ್ಕಿ ನಿರ್ವಹಿಸಿದರು.