ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕನ್ನಡ ಅನುಷ್ಠಾನ ಕುರಿತು ಸಭೆ ನಡೆಸಿದರು.
ಬೆಳಗಾವಿ: ಖಾಸಗಿ ಆಂಗ್ಲಮಾಧ್ಯಮ, ಮರಾಠಿ ಶಾಲೆಗಳಲ್ಲಿ ನಾಡಗೀತೆ ಬಳಕೆ ಮಾಡದಿದ್ದಲ್ಲಿ ನೋಟಿಸ್ ಕೊಟ್ಟು ಎಚ್ಚರಿಸಲಾಗುವುದು. ಆ ಬಳಿಕವೂ ನಾಡಗೀತೆ ಬಳಕೆ ಮಾಡದಿದ್ದಲ್ಲಿ ಅಂತಹ ಶಾಲೆಗಳ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಜರುಗಿದ ಕನ್ನಡಪರ ಸಂಘಟನೆ, ಕನ್ನಡಪರ ಹೋರಾಟಗಾರರೊಂದಿಗೆ ನಡೆದ ಚಿಂತನ-ಮಂಥನ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಸಹಕಾರಿ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ಸೂಚನೆ ನೀಡಲಾಗಿದೆ. ನಿಯಮ ಪಾಲಿಸದ ಸಂಘ ಸಂಸ್ಥೆಗಳಿಗೆ ನೋಟಿಸ್ ನೀಡಲಾಗುವುದು. ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ವಿಷಯದ ಕುರಿತು ಪ್ರಥಮವಾಗಿ ಆದ್ಯತೆ ನೀಡಲಾಗಿದೆ ಎಂದರು.
ಗಡಿ ಕನ್ನಡ ಶಾಲೆಗಳ ಸುಧಾರಣೆ, ಕನ್ನಡ ನಾಮಫಲಕ ಕಡ್ಡಾಯ, ‘ಬೆಳಗಾವಿ’ ಹೆಸರು ಕಡ್ಡಾಯ ಬಳಕೆ, ಕನ್ನಡಲ್ಲಿ ಪತ್ರ ವ್ಯವಹಾರ, ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಯೋಜನೆ ಸೇರಿದಂತೆ ಕನ್ನಡ ಭಾಷೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದರು.
ಕನ್ನಡಪರ ಹೋರಾಟಗಾರರಾದ ಅಶೋಕ ಚಂದರಗಿ, ವಾಜಿದ್ ಹಿರೆಕೋಡಿ, ಶ್ರೀನಿವಾಸ ತಾಳೂರಕರ, ಮಹಾದೇವ ತಳವಾರ, ಸುರೇಶ ಗವನ್ನವರ, ದೀಪಕ ಗುಡಗನಟ್ಟಿ ಇತರರು ಮಾತನಾಡಿ ವಿವಿಧ ಸಲಹೆಗಳನ್ನು ನೀಡಿದರು.
ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಪಂ ಸಿಇಒ ರಾಹುಲ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು.