ಅಥಣಿ ತಾಲೂಕಿನ ಕಲ್ಲೊತ್ತಿಯಲ್ಲಿ ಶಿಥಿಲ ಸ್ಥಿತಿ ತಲುಪಿರುವ ಪೊಲೀಸ್ ಹೊರಠಾಣೆ. 
ಬೆಳಗಾವಿ

ಕಲ್ಲೊತ್ತಿ ಹೊರಠಾಣೆ ಬಂದ್ ಮಾಡದಿರಿ

ಸಂಬರಗಿ: ಶಿಥಿಲ ಕಟ್ಟಡ, ಸಿಬ್ಬಂದಿ ಕೊರತೆ ಕಾರಣದಿಂದ ಅಥಣಿ ತಾಲೂಕಿನ ಕಲ್ಲೊತ್ತಿ ಗ್ರಾಮದ ಪೊಲೀಸ್ ಹೊರಠಾಣೆ ಬಂದ್ ಮಾಡುವ ಕ್ರಮ ಕೈಬಿಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ಕಲ್ಲೊತ್ತಿ ಗ್ರಾಮದಲ್ಲಿ ಪೊಲೀಸ್ ಹೊರಠಾಣೆ ಕಾರ್ಯನಿರ್ವಹಿಸುತ್ತಿದೆ. ಈಗಲೂ ಆನಂದಪುರ, ಅಜೂರ, ಖಿಳೇಗಾಂವ, ಪಾಂಡೆಗಾವ, ಶಿರೂರ, ಸಂಬರಗಿ, ಅರಳಿಹಟ್ಟಿ, ಮೊಬನಾಳ, ವಿಷ್ಣುವಾಡಿ, ಜಕಾರಹಟ್ಟಿ, ಮದಬಾವಿ, ಜಂಬಗಿ, ತಾವಸಿ, ನಾಗನೂರ ಪಿಎ, ದೇವನೂರ, ಮಲಬಾದ, ಗುಂಡೇವಾಡಿ, ಬಾಳಿಗೇರಿ, ಕಿಳಣಗಿ, ಶಿವನೂರ, ಹಬ್ಯಾಳ, ಮಯನತ್ತಿ ಗ್ರಾಮಗಳು ಕಲ್ಲೊತ್ತಿ ಉಪಠಾಣೆ ವ್ಯಾಪ್ತಿಗೆ ಒಳಪಟ್ಟಿವೆ.
ಶಿಥಿಲ ಕಟ್ಟಡ, ಸಿಬ್ಬಂದಿ ಕೊರತೆ ಸೇರಿ ಇನ್ನಿತರ ಕಾರಣಗಳಿಂದ ಕಲ್ಲೊತ್ತಿ ಹೊರಠಾಣೆಯನ್ನು ಪೊಲೀಸ್ ಇಲಾಖೆ ಬಂದ್ ಮಾಡಿದರೆ, 22 ಗ್ರಾಮದ ಜನರು ಪೊಲೀಸ್ ಠಾಣೆ ಸಂಬಂಧಿತ ಕೆಲಸಗಳಿಗೆ ಅಥಣಿ ನಗರಕ್ಕೆ ಅಲೆದಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲ್ಲೊತ್ತಿ ಹೊರಠಾಣೆಯನ್ನು ಹೊಸದಾಗಿ ನಿರ್ಮಿಸಿ, ಅಲ್ಲಿ ಅಮರ್ಪಕ ಸಂಖ್ಯೆಯಲ್ಲಿ ಸಿಬ್ಬಂದಿ ನೇಮಿಸಬೇಕು. ಇಲ್ಲವೇ ಖಿಳೇಂಗಾವ ಅಥವಾ ಸಂಬರಗಿ ಗ್ರಾಮದಲ್ಲಿ ಹೊಸದಾಗಿ ಪೊಲೀಸ್ ಹೊರಠಾಣೆ ಆರಂಭಿಸಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಕಲ್ಲೊತ್ತಿ ಹೊರಠಾಣೆಗೆ ಶೀಘ್ರವೇ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.