ಬೆಳಗಾವಿ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರ ನಿಯೋಗಕ್ಕೆ ಮೇಯರ್ ಪ್ರೀತಿ ಕಾಮಕರ ಚರ್ಚಿಸಿದರು. ಸವಿತಾ ಕಾಂಬಳೆ, ಸಂತೋಷ ಪೇಡನೇಕರ, ರೇಖಾ ಹೂಗಾರ ಇತರರಿದ್ದರು.
ಕಂದಾಯ ಸಂಗ್ರಹಣೆ, ಘನ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ ಹಾಗೂ ನಗರ ಸ್ವಚ್ಛತಾ ವ್ಯವಸ್ಥೆಯ ಕಾರ್ಯವೈಖರಿಯನ್ನು ಅಧ್ಯಯನ ಮಾಡಲು ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರ ನಿಯೋಗ ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.
ನಗರದ ಅಭಿವೃದ್ಧಿಗೆ ಅಗತ್ಯವಾದ ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಪರಿಣಾಮಕಾರಿ ತೆರಿಗೆ ಸಂಗ್ರಹಣೆಯ ಮಾದರಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಸಾರ್ವಜನಿಕ ಸೇವೆಗಳ ಅನುಷ್ಠಾನ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
ಕಲಬುರಗಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ಕಮತನೂರು, ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಸಂಗ್ರಹಣೆ, ಆಸ್ತಿ ತೆರಿಗೆ ವಸೂಲಾತಿ, ಘನ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ನಗರ ಸ್ವಚ್ಛತಾ ವ್ಯವಸ್ಥೆಯಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ತಿಳಿದುಕೊಳ್ಳಲು ಬಂದಿದ್ದೇವೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 100 ಕೋಟಿ ಮೊತ್ತದ ಬಜೆಟ ಮಂಡನೆಯಾಗಿದ್ದು, ನಗರದ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ತೆರಿಗೆ ಸಂಗ್ರಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಕಾರ್ಯವೈಖರಿಯನ್ನು ಅಧ್ಯಯನ ಮಾಡಲಾಗುತ್ತಿದೆ. ಉತ್ತಮ ಪದ್ಧತಿಗಳನ್ನು ಕಲಬುರಗಿಯಲ್ಲೂ ಅಳವಡಿಸಿಕೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಬೆಳಗಾವಿ ಪಾಲಿಕೆ ಮೇಯರ್ ಪ್ರೀತಿ ಕಾಮಕರ ಮಾತನಾಡಿ, ಕಲಬುರಗಿ ಅಧ್ಯಯನ ತಂಡಕ್ಕೆ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೆರಿಗೆ ಸಂಗ್ರಹಣೆಯ ವಿಧಾನಗಳು, ಸಾರ್ವಜನಿಕ ಸೇವೆಗಳ ನಿರ್ವಹಣೆ, ತ್ಯಾಜ್ಯ ಸಂಸ್ಕರಣೆ, ಸ್ವಚ್ಛತಾ ಕ್ರಮಗಳು ಹಾಗೂ ನೀರು ಸರಬರಾಜು ವ್ಯವ,ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿ, ಅನುದಾನ ಹಂಚಿಕೆ, ತೆರಿಗೆ ಸಂಗ್ರಹ, ಹಂಚಿಕೆ, ಅಭಿವೃದ್ಧಿ ಯೋಜನೆಗಳು, ನಾಗರಿಕ ಸೇವೆಗಳ ಸುಧಾರಣೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳ ಕುರಿತು ವಿವರಿಸಲಾಗಿದೆ ಎಂದರು.
ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾದ ನಿಂಗಮ್ಮ, ಪ್ರಿಯಾಂಕಾ,ಬೆಳಗಾವಿ ಪಾಲಿಕೆ ಸದಸ್ಯರಾದ ಸವಿತಾ ಕಾಂಬಳೆ, ಸಂತೋಷ ಪೇಡನೇಕರ, ರೇಖಾ ಹೂಗಾರ ಇತರರಿದ್ದರು.