ನೀರು ಮೀಟರ್‌ಗಳು ನಿರ್ವಹಣೆಯ ಕೊರತೆಯಿಂದ ಹಾಳಾಗಿದ್ದು,
ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಅಳವಡಿಸಿದ್ದ ನೀರು ಮೀಟರ್‌ಗಳು ಹಾಳಾಗಿ ಬಳಕೆಯೇ ಇಲ್ಲದಂತಾಗಿವೆ!
ಹೌದು.ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು,1230 ಕಾಮಗಾರಿಗಳ ಪೈಕಿ 930 ಕಾಮಗಾರಿಗಳು ಪೂರ್ಣಗೊಂಡಿದ್ದು,300 ಕ್ಕೂ ಅಧಿಕ ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ. ವರ್ಷದ ಅಂತ್ಯದಲ್ಲಿ ಜಿಲ್ಲೆಯ ಅಂದಾಜು 650ಕ್ಕೂ ಹೆಚ್ಚು ಗ್ರಾಮಗಳಿಗೆ ದಿನದ 24 ಗಂಟೆಗ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಗುರಿ ಸರ್ಕಾರ ಹೊಂದಿದೆ. ಆದರೆ, ನೀರಿನ ಬಳಕೆ ನಿಯಂತ್ರಣ ಹಾಗೂ ನೀರಿನ ಕರ ವಸೂಲಿಗೆ ಅಳವಡಿಸಿದ್ದ ಮೀಟರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿರುವುದು ಯೋಜನೆಯ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ.
ನದಿ ಮತ್ತು ಕೊಳವೆ ಬಾವಿ ನೀರಿನ ಮೂಲ ಹೊಂದಿರುವ ಗ್ರಾಮಗಳಿಗೆ ದಿನದ 24 ಗಂಟೆಗಳ ನೀರು ಪೂರೈಕೆ ಮಾಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿತ್ತು. ಆದರೆ, ಮನೆಗಳಿಗೆ ಅಳವಡಿಸಿದ್ದ ನೀರು ಮೀಟರ್‌ಗಳು ನಿರ್ವಹಣೆಯ ಕೊರತೆಯಿಂದ ಹಾಳಾಗಿದ್ದು, ನೀರಿನ ಬಳಕೆ ಎಷ್ಟು ಎಂಬುದರ ಲೆಕ್ಕವೇ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನೀರಿನ ಕರ ವಸೂಲಿ ಕಾರ್ಯವೂ ಅಸ್ತವ್ಯಸ್ತವಾಗಿದೆ.
ಸದ್ಯ ಜಿಲ್ಲೆಯ 1080 ಹಳ್ಳಿಗಳ ಪೈಕಿ 350ಕ್ಕೂ ಅಧಿಕ ಹಳ್ಳಿಗಳು ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಸಮೀಪದಲ್ಲಿ ಹಳ್ಳ ಅಥವಾ ನದಿಗಳು ಇಲ್ಲದ ಕಾರಣ ಅನೇಕ ಗ್ರಾಮಗಳು ಕೊಳವೆ ಬಾವಿ ನೀರಿನ ಮೇಲೆಯೇ ಅವಲಂಬಿತವಾಗಿವೆ. ಇಂತಹ ಪ್ರದೇಶಗಳಿಗೆ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ಮೂಲಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಘೋಷಣೆಯಾಗಿವೆ.ಆದರೆ, ಅನುಷ್ಠಾನಗೊಂಡಿಲ್ಲ. ಈಗಾಗಲೇ ಚಿಕ್ಕೋಡಿ ವಿಭಾಗದಲ್ಲಿ ಜೆಜೆಎಂ ಯೋಜನೆ ಅಡಿಯಲ್ಲಿ 4,73,788 ಮನೆಗಳ ಪೈಕಿ 3,85,437 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಬಹುತೇಕ ಕಡೆ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
......................................
ಜೆಜೆಂ ಯೋಜನೆ ಅಡಿಯಲ್ಲಿ ಕೈಗೊಂಡಿರುವ ಬಹುತೇಕ ಕಾಮಗಾರಿಗಳು ಕಳಪೆ ಮಟ್ಟದಿಂದ ಕೊಡಿದ್ದು, ಪೈಪಲೈನ್‌ಗಳು ಸೋರಿಕೆಯಾಗುತ್ತಿವೆ. ಅಲ್ಲದೆ, ಗ್ರಾಪಂ ಆಡಳಿತವು ಅದೇ ಪೈಪಲೈನ್ ಮಾರ್ಗಗಳ ದುರಸ್ತಿಗೆ ವಾರ್ಷಿಕ ಲಕ್ಷಾಂತರ ರೂ. ವೆಚ್ಚ ಮಾಡುತ್ತಿವೆ. ಗುತ್ತಿಗೆದಾರರ ರಕ್ಷಣೆಗಾಗಿ ಗ್ರಾಪಂ ಸದಸ್ಯರು ಕಾಮಗಾರಿ ಪರಿಶೀಲನೆ ನಡೆಸದೆ ಹಾಗೆ ಗ್ರಾಪಂಗಳಿಗೆ ಹಸ್ತಾಂತರ ಮಾಡಿದ್ದಾರೆ. ಇದರಿಂದ ಹೆಚ್ಚು ನಷ್ಟವಾಗುತ್ತಿದೆ ವಿನಃ ಈ ಯೋಜನೆಯಿಂದ ಲಾಭವಾಗುತ್ತಿಲ್ಲ ಎಂದು ಗ್ರಾಪಂ ಮಾಜಿ ಸದಸ್ಯರು ದೂರಿದ್ದಾರೆ.
.................................
ಜಿಲ್ಲೆಯಲ್ಲಿ ಜೆಜೆಎಂ ಅಡಿಯಲ್ಲಿ ನಳ ಸಂಪರ್ಕ ಕಲ್ಪಿಸುವ ಗುರಿ
ಸಾರ್ವಜನಿಕರು ಕುಡಿಯುವ ನೀರು ಬಾರದಿರುವುದು, ತಿಳುವಳಿಕೆ ಕೊರೆತೆಯಿಂದಾಗಿ ಮೀಟರ್‌ಗಳನ್ನು ಹಾಳು ಮಾಡಿದ್ದಾರೆ. ಹೀಗಾಗಿ ಎಲ್ಲೆಡೆ ಮೀಟರ್‌ಗಳನ್ನು ಪರಿಶೀಲನೆ ನಡೆಸುತ್ತಿದ್ದು, ಹಾಳಾಗಿರುವ ಕಡೆಯಲ್ಲಾ ಹೊಸದಾಗಿ ಮೀಟರ್ ಅಳವಡಿಸಲು ಕ್ರಮ ವಹಿಸಲಾಗಿದೆ.
-ಕಿರಣ ಘೋರ್ಪಡೆ, ಬೆಳಗಾವಿ ವಿಭಾಗದ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಕಾರಿ ಅಭಿಯಂತರರು