ಶಿರಗುಪ್ಪಿಯ ಅರಿಹಂತ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಜೆಸಿಎಲ್ ಸಹಕಾರಿಯ ಸರ್ವ ಸಾಧಾರಣ ಸಭೆಯಲ್ಲಿ ಭಮ್ಮಣ್ಣ ಚೌಗುಲೆ ಮಾತನಾಡಿದರು. ಅಮರ ದುರ್ಗಣ್ಣವರ, ಅಪ್ಪಾಸಾಬ ಶಿರಗುಪ್ಪೆ ಇತರರಿದ್ದರು.
ಕಾಗವಾಡ: ಠೇವುದಾರರು, ಸಾಲಗಾರರ ಸಹಕಾರ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ಪ್ರಾಮಾಣಿಕೆ ಸೇವೆಯಿಂದ ಜಿನ್ನಪ್ಪಣ್ಣ ಚೌಗುಲೆ ಲಾಲಬಹದ್ದೂರ್ ಕ್ರೆಡಿಟ್ ಸೌಹಾರ್ದ ಸಹಕಾರಿಯು ೨.೧೯ ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೨೫ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಅಧ್ಯಕ್ಷ ಭಮ್ಮಣ್ಣ ಚೌಗುಲೆ ತಿಳಿಸಿದರು.
ತಾಲೂಕಿನ ಶಿರಗುಪ್ಪಿಯ ಅರಿಹಂತ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ಶ್ರೀ ಜಿನ್ನಪ್ಪಣ್ಣ ಚೌಗುಲೆ ಲಾಲಬಹದ್ದೂರ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ೩೭ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು.
ಸಿಇಒ ವಿದ್ಯಾಸಾಗರ ಚೌಗುಲೆ ವರದಿ ಓದಿ, ಸಹಕಾರಿಯು ೧೨ ಶಾಖೆ ಹೊಂದಿದ್ದು, ಒಟ್ಟು ೪,೬೬೧ ಸದಸ್ಯರು ಇದ್ದಾರೆ. ೨೨.೭೦ ಲಕ್ಷ ರೂ. ಷೇರು ಬಂಡವಾಳ, ೧೬.೭೨ ಕೋಟಿ ರೂ. ನಿಧಿ, ೧೬೬.೭೨ ಕೋಟಿ ರೂ. ಠೇವು, ೯೩.೧೩ ಕೋಟಿ ರೂ. ಸಾಲ ವಿತರಿಸಲಾಗಿದೆ. ಸದಸ್ಯರಿಗೆ ೧ ಲಕ್ಷ ರೂ.ವರೆಗೆ ಅಪಘಾತ ವಿಮೆ, ನಿಯಮಿತ ಮರುಪಾವತಿ ಮಾಡುವ ಸಾಲಗಾರರಿಗೆ ಬಡ್ಡಿಯಲ್ಲಿ ಶೇ.೧-೨ರವರೆಗೆ ವಿನಾಯಿತಿ, ಸದಸ್ಯರ ನಿಧನದ ನಂತರ ಮರಣೋತ್ತರ ನಿಧಿ ೨,೦೦೦ ರೂ., ನೇತ್ರ ಚಿಕಿತ್ಸೆಗೆ ೩,೦೦೦ ರೂ., ಹೃದಯ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ೫,೦೦೦ ರೂ. ನಿಽ ನೀಡುವ ವ್ಯವಸ್ಥೆ ಮತ್ತು ಉಚಿತ ನೇತ್ರ ತಪಾಸಣೆ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಥಣಿ ಶಾಖೆಯ ಅಮರ ದುರ್ಗಣ್ಣವರ ಮಾತನಾಡಿ, ಅಧ್ಯಕ್ಷ ಭಮ್ಮಣ್ಣ ಚೌಗುಲೆ ಮುಂದಾಳತ್ವದಲ್ಲಿ ಸಹಕಾರಿ ರೈತರು, ಉದ್ಯಮದಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಿ, ಸಾಮಾಜಿಕ ಕಳಕಳಿಯೊಂದಿಗೆ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದರು.
ಉಪಾಧ್ಯಕ್ಷ ಅಪ್ಪಾಸಾಬ ಶಿರಗುಪ್ಪೆ, ವಿವಿಧ ಶಾಖೆಯ ಜಿನ್ನಪ್ಪ ಬೋರಗಾಂವೆ, ಅಪ್ಪಾಸಾಬ ಚೌಗುಲಾ, ರಾವಸಾಬ ಬುಗಡೆ, ಯಮನಪ್ಪ ಪಾಟೀಲ, ಅರುಣ ಯಂದಗೌಡರ, ಬಾಳಾಸಾಬ ವಿಸಾಪುರೆ, ಚೇತನ ಘೋಡಕೆ, ಬಸಗೌಡ ಪಾಟೀಲ, ಶುಭಂ ತೇಜನ್ನವರ, ಪಾಪಾಚಂದ ಬಣಜವಾಡ ಇತರರಿದ್ದರು.