ಭೂತರಾಮನಹಟ್ಟಿ ಗ್ರಾಮದಲ್ಲಿ ಸಿದ್ಧಾಯತನ ವಸತಿಗೃಹ ಕಟ್ಟಡವನ್ನು ಡಾ.ಸುರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಸಂಜಯ ಪಾಟೀಲ, ಸುನೀಲ ಹನಮನ್ನವರ, ಗೋಪಾಲ ಜಿನಗೌಡ ಇತರರಿದ್ದರು. 
ಬೆಳಗಾವಿ

ಜೈನ ಧರ್ಮಕ್ಕೆ ಜಿಲ್ಲೆ ಕೊಡುಗೆ ಅಪಾರ - ಡಾ. ಸುರೇಂದ್ರ ಹೆಗ್ಗಡೆ

ಬೆಳಗಾವಿ: ಜಿಲ್ಲೆಯು ಜೈನ ಧರ್ಮಕ್ಕೆ ಅನೇಕ ಮುನಿಗಳು ಮತ್ತು ಸ್ವಾಮಿಗಳನ್ನು ನೀಡಿದ್ದು, ಧಾರ್ಮಿಕ ಕ್ಷೇತ್ರದ ಜತೆ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಗಮನಾರ್ಹ ಕೆಲಸ ಮಾಡಿದೆ ಎಂದು ಧರ್ಮಸ್ಥಳದ ಡಾ.ಸುರೇಂದ್ರ ಹೆಗ್ಗಡೆ ಹೇಳಿದರು.
ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ಬುಧವಾರ ಜೈನ ಯುವಕ ಮಂಡಳಿ ನಿರ್ಮಿಸಿರುವ ಸಿದ್ಧಾಯತನ ವಸತಿಗೃಹ ಕಟ್ಟಡ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ಜೈನ ಧರ್ಮದ ಸಂಸ್ಕಾರ ಜತೆ ಉತ್ತಮ ಶಿಕ್ಷಣ ನೀಡುವ ಕೆಲಸ ಒಳ್ಳೆಯದು ಎಂದರು.
ಡಾ.ವಿನೋದ ದೊಡ್ಡಣ್ಣವರ ಮಾತನಾಡಿ, ಸಾಮಾಜಿಕ ಮಾಧ್ಯಮದಿಂದಾಗಿ ಯುವಪೀಳಿಗೆ ಧರ್ಮ ಬಿಟ್ಟು ಇತರ ವಿಷಯಗಳಲ್ಲಿ ತೊಡಗಿದೆ. ಇಂತಹ ಸಮಯದಲ್ಲಿ ಜೈನ ಯುವಕ ಮಂಡಳಿ ಇಲ್ಲಿನ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಧರ್ಮ ರಕ್ಷಣೆ ಕಾರ್ಯವನ್ನು ಪ್ರಾರಂಭಿಸಿದೆ ಎಂದರು.
ಉದ್ಯಮಿ ಗೋಪಾಲ ಜಿನಗೌಡ ಮಾತನಾಡಿ, ಜೈನ ಯುವಕ ಮಂಡಳಿ ಮಹಿಳೆಯರಿಗೂ ವಸತಿಗೃಹ ಪ್ರಾರಂಭಿಸಬೇಕು. ಅದಕ್ಕೆ ಸೂಕ್ತ ಸಹಕಾರ ನೀಡುತ್ತೇವೆ ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸುನೀಲ ಹನಮನ್ನವರ ಮಾತನಾಡಿ, ತಮ್ಮ ಕುಟುಂಬದ ವತಿಯಿಂದ ಎರಡು ಕೊಠಡಿ ನಿರ್ಮಿಸಿ ಕೊಡಲಾಗುವುದು. ಸರ್ಕಾರದಿಂದ 50 ಲಕ್ಷ ರೂ.ದಿಂದ 1 ಕೋಟಿ ರೂ.ಅನುದಾನ ಒದಗಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಸಂಜಯ ಪಾಟೀಲ, ದಾನಿಗಳಾದ ಎಲ್.ಡಿ.ಶಾ ಮತ್ತು ಶಶಾಂಕ ಶಾ, ಅಂಕಲಿಯ ಡಾ.ಎನ್.ಎ.ಮಗದುಮ್ಮ, ಸಂಕನಟ್ಟಿಯ ದಾನಿ ಮಹಾವೀರ ಪಡನಾಡ, ಜೈನ ಯುವಕ ಮಂಡಳಿ ಮ್ಯಾನೇಜಿಂಗ್ ಟ್ರಸ್ಟಿ ಭೂಷಣ ಮಿರ್ಜಿ, ಸ್ಥಾಪಕ ಟ್ರಸ್ಟಿ ರಾಮ ಕಸ್ತೂರಿ, ದೀಪಕ ಲೇಂಗಡೆ, ರಮೇಶ ಚಿವಟೆ, ವೃಷಭ ದೊಡ್ಡಣ್ಣವರ, ಉದಯ ಕೊಲ್ಲಾಪುರೆ, ಸುಧೀರ ಪಾಟೀಲ, ಸುಹಾಸ ಮೋಹಿರೆ, ಸುಹಾಸ ಹುಲಬತ್ತೆ, ಸಚಿನ ಪತ್ರಾವಳಿ, ದೀಪಕ ಧಡೋತಿ ಇತರರಿದ್ದರು.