ಬೆಳಗಾವಿ: ಬಾನೆತ್ತರಕ್ಕೆ ಹಾರಾಡುತ್ತಿದ್ದ ಬಾವುಟ, ಮುಗಿಲು ಮುಟ್ಟಿದ ಜೈ ಶಿವಾಜಿ, ಜೈ ಭವಾನಿ ಜಯಘೋಷ, ಯುವ ಮನಸ್ಸುಗಳ ಮೋಡಿ ಮಾಡಿದ ಸಂಗೀತ ಲಹರಿ. ಶಿವಾಜಿ ಮಹಾರಾಜರ ಇತಿಹಾಸವನ್ನು ಎಳೆಎಳೆಯಾಗಿ ತೆರೆದಿಟ್ಟ ಸ್ತಬ್ಧಚಿತ್ರ, ರೂಪಕ. ಇವು ನಗರದಲ್ಲಿ ಮಂಗಳವಾರ ಸಂಜೆ ನಡೆದ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯಗಳು.
ನರಗುಂದಕರ ಭಾವೇ ಚೌಕ್‌ನಲ್ಲಿ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹನುಮಂತ ಕೊಂಗಾಲಿ, ಸಂಸದ ಜಗದೀಶ ಶೆಟ್ಟರ ಪಲ್ಲಕ್ಕಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಡಾ.ರವಿ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಮಲ್ಲೇಶ ಚೌಗುಲೆ, ಮುರೇಂದ್ರಗೌಡ ಪಾಟೀಲ, ಸುಭಾಸ ಪಾಟೀಲ, ಪಾಲಿಕೆ ಸದಸ್ಯರು ಭಾಗವಹಿಸಿದ್ದರು.
ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ವಾಹನಗಳಲ್ಲಿ ರಸ್ತೆಗಿಳಿದ ಸ್ತಬ್ಧ ಚಿತ್ರಗಳು, ರೂಪಕಗಳು ಶಿವಾಜಿ ಇತಿಹಾಸ ಪ್ರತಿಬಿಂಬಿಸಿದವು. ಅದರಲ್ಲೂ ಶಿವಾಜಿ ಪ್ರತಿಮೆ ಹಾಗೂ ಬಸವಣ್ಣನವರ ಭಾವಚಿತ್ರದ ರೂಪಕ ಒಟ್ಟಿಗೆ ಸಾಗಿದ್ದು ವಿಶೇಷವಾಗಿತ್ತು.
ಶಿವಾಜಿ ವೇಷಧಾರಿ ಮಕ್ಕಳು ನೋಡುಗರ ಗಮನಸೆಳೆದರು. ರಸ್ತೆ ಇಕ್ಕೆಲಗಳಲ್ಲಿ ಹಾಕಲಾಗಿದ್ದ ವೇದಿಕೆಗಳಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಶಿವಾಜಿ ಚರಿತ್ರೆ ಕುರಿತು ಕಿರುನಾಟಕ ಪ್ರದರ್ಶಿಸಿದರು. ಇಂಪಾಗಿ ತೇಲಿ ಬಂದ ಸಂಗೀತ ನೆರೆದಿದ್ದ ಜನರನ್ನು ಹೊಸತೊಂದು ಲೋಕಕ್ಕೆ ಕರೆದೊಯ್ದಿತು. ಜಾನಪದ ಕಲಾವಿದರು ಪ್ರದರ್ಶಿಸಿದ ನೃತ್ಯ ಅದ್ಭುತವಾಗಿತ್ತು. ಡೊಳ್ಳುಕುಣಿತ, ಲೇಜಿಮ್ ಮತ್ತಿತರ ಕಲಾ ಪ್ರಕಾರಗಳು ಕಣ್ಮನ ಸೆಳೆದವು.
ಮೆರವಣಿಗೆ ನರಗುಂದಕರ ಭಾವೆ ವೃತ್ತ, ಮಾರುತಿ ಗಲ್ಲಿ, ಹುತಾತ್ಮವೃತ್ತ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಟಿಳಕ್ ಚೌಕ್ ಮೂಲಕ ಕಪಿಲೇಶ್ವರ ದೇವಸ್ಥಾನವರೆಗೆ ನಡೆಯಿತು.
ಬಾಲಕಿಯರ ಜಾಂಝ್-ಪಥಕ್: ತಲೆಗೆ ಕೇಸರಿ ಪೇಟ ತೊಟ್ಟು, ಬಣ್ಣ ಬಣ್ಣದ ಸೀರೆಯುಟ್ಟು ಬಂದಿದ್ದ ಬಾಲಕಿಯರು ಡೊಳ್ಳು ಬಾರಿಸಿದರು. ‘ನಾವು ಯಾರಿಗೂ ಕಮ್ಮಿ ಇಲ್ಲ’ ಎನ್ನುವಂತೆ ಜಾಂಝ್-ಪಥಕ್ ಸಂಗೀತದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರನ್ನು ಸಂಗೀತದ ಅಲೆಯಲ್ಲಿ ತೇಲಿಸಿದರು.
ಬಿಗಿ ಬಂದೋಬಸ್ತ್: ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶ ಹಾಗೂ ಮೆರವಣಿಗೆ ಮಾರ್ಗದ ಉದ್ದಕ್ಕೂ ವಿಶೇಷ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಕೆಲ ಮಂಡಳಿಗಳ ಸ್ವಯಂಸೇವಕರು ಪೊಲೀಸರ ಕಾರ್ಯಕ್ಕೆ ಸಹಕರಿಸಿದರು.