ಬೆಳಗಾವಿ ತಾಲೂಕಿನ ಐಟಿಬಿಪಿ ಕೇಂದ್ರದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಜಿಪಂ ಸಿಇಒ ರಾಹುಲ ಶಿಂಧೆ, ಕೇಂದ್ರದ ಡೆಪ್ಯೂಟಿ ಜನರಲ್ ಬ್ರಿಗೇಡಿಯರ್ ಸಂದೀಪ ಜುಂಜಾ, ಕಮಾಂಡೆಂಟ್ ಸಿದ್ದಿಕ್ ಪಿ.ಪಿ ಇದ್ದರು.
ಬೆಳಗಾವಿ: ತಾಲೂಕಿನ ಹಾಲಬಾವಿ ಗ್ರಾಮದ ಹೊರವಲಯದಲ್ಲಿರುವ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ತರಬೇತಿ (ಐಟಿಬಿಪಿ) ಕೇಂದ್ರಕ್ಕೆ ವಂಟಮುರಿ ಗ್ರಾಮ ಪಂಚಾಯತ ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ ಶಿಂಧೆ ಸೂಚಿಸಿದರು.
ಐಟಿಬಿಪಿ ತರಬೇತಿ ಕೇಂದ್ರದ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಕೇಂದ್ರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿವ ಮಾತನಾಡಿದ ಅವರು, ಹಾಲಬಾವಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಕುಡಿಯುವ ನೀರಿನ ಪೈಪಲೈನ್ ಅಳವಡಿಕೆ ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು, ಕೇಂದ್ರಕ್ಕೆ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ತಿಳಿಸಿದರು.
ಐಟಿಬಿಪಿ ತರಬೇತಿ ಕೇಂದ್ರಕ್ಕೆ ದೇಶದ ವಿವಿಧ ರಾಜ್ಯಗಳಿಂದ ತರಬೇತಿ ಪಡೆಯಲು ಶಿಬಿರಾರ್ಥಿಗಳು ಆಗಮಿಸುತ್ತಾರೆ. ಹೀಗಾಗಿ, ಹಾಲಬಾವಿ ಗ್ರಾಮ ಹಾಗೂ ತರಬೇತಿ ಕೇಂದ್ರದ ಸುತ್ತಲೂ ಘನ ತ್ಯಾಜ್ಯ ನಿರ್ವಹಣೆಗೆ ವಂಟಮುರಿ ಗ್ರಾಪಂದಿಂದ ಅಗತ್ಯ ಕ್ರಮ ವಹಿಸಬೇಕು. ನಿತ್ಯ ತ್ಯಾಜ್ಯ ವಿಲೇವಾರಿಯಾಗಬೇಕು. ಬೀದಿನಾಯಿ ಹಾವಳಿ ಎದುರಾಗದಂತೆ ಯಾವ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ತರಬೇತಿ ಕೇಂದ್ರದ ಡೆಪ್ಯೂಟಿ ಜನರಲ್ ಬ್ರಿಗೇಡಿಯರ್ ಸಂದೀಪ ಜುಂಜಾ ಮಾತನಾಡಿ, ಫೆಬ್ರುವರಿಯಿಂದ ಜೂನ್ ತಿಂಗಳವರೆಗೆ ತರಬೇತಿ ಕೇಂದ್ರದಲ್ಲಿ ಕುಡಿಯುವ ನೀರಿನ ತೊಂದರೆಯಾಗುತ್ತಿದೆ. ಹೀಗಾಗಿ, ವಿಶೇಷವಾಗಿ ಈ ಸಂದರ್ಭದಲ್ಲಿ ನಿರಂತರವಾಗಿ ನೀರಿನ ಪೂರೈಕೆಯಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದರು.
ಕೇಂದ್ರದ ಕಮಾಂಡೆಂಟ್ ಸಿದ್ದಿಕ್ ಪಿ.ಪಿ., ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಘೋರ್ಪಡೆ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಆನಂದ ಪಾಟೀಲ, ತಾಪಂ ಇಒ ಯಶವಂತಕುಮಾರ ಇತರರಿದ್ದರು.