ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಕೀರ್ತಿ ರಜಪೂತ, ನೀಲಗಂಗಾ ಚರಂತಿಮಠ, ರಾಜನಂದಾ ಘಾರ್ಗಿ, ದೀಪಿಕಾ ಚಾಟೆ ಇತರರಿದ್ದರು. 
ಬೆಳಗಾವಿ

ಸಾಹಿತ್ಯಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುವ ಕಾರ್ಯವಾಗಬೇಕು

ಡಿ.ವಿ. ಕಮ್ಮಾರ

ಬೆಳಗಾವಿ :

ಸಾಹಿತ್ಯವು ಸಮಾಜದ ಚಿಂತನೆಗಳನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ, ತಮ್ಮ ಜೀವನದ ಮೂಲಕ ಸಮಾಜಕ್ಕೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುವ ಕೆಲಸವಾಗಬೇಕು. ಅದಕ್ಕಾಗಿ ದತ್ತಿನಿಧಿಗಳನ್ನು ಸ್ಥಾಪಿಸಿ, ಸಾಹಿತ್ಯಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷೆ ಕೀರ್ತಿ ರಜಪೂತ ಹೇಳಿದರು.

ಜಿಲ್ಲಾ ಲೇಖಕಿಯರ ಸಂಘದಿಂದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಭಾನುವಾರ ಸಿದ್ದರಾಮಯ್ಯ ಚರಂತಿಮಠ, ಸುನಂದಾ ಮುಳೆ, ಮೃಣಾಲಿನಿ ಅಂಗಡಿ, ಸರಸ್ವತಿ ದೇಸಾಯಿ ಹಾಗೂ ಗಂಗಾ ಕಂಬಾರ ಸ್ಮರಣಾರ್ಥ ಆಯೋಜಿಸಿದ್ದ ಬೆಳ್ಳಿ ಬೆಡಗು ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದತ್ತಿನಿಧಿಗಳು ಕೇವಲ ಸ್ಮರಣಾರ್ಥ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಚಟುವಟಿಕೆಗಳ ನಿರಂತರ ಬೆಳವಣಿಗೆಗೆ ಪೂರಕವಾಗಬೇಕು ಎಂದರು.
ಸಾಹಿತಿಗಳು ಕೂಡ ಅಂಧ ಮಕ್ಕಳ ಬಗ್ಗೆ ಲೇಖನಗಳನ್ನ ಬರೆಯುವುದರಿಂದ ಜನರಲ್ಲಿ ಅವರ ಬಗ್ಗೆ ಅರಿವು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಬಹುದು. ಜತೆಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅಗತ್ಯವಾದ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ನೀಡಬೇಕು. ವಿಶೇಷ ಮಕ್ಕಳ ಶಿಕ್ಷಣ ಮತ್ತು ಪ್ರತಿಭಾ ವಿಕಸನಕ್ಕೆ ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.
ಸಾಹಿತಿ ನೀಲಗಂಗಾ ಚರಂತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಮುನಾ ಕಂಬಾರ ಹಾಗೂ ರೇಖಾ ಶ್ರೀನಿವಾಸ ದತ್ತಿಗಳ ಬಗ್ಗೆ ವಿವರಿಸಿದರು.
ರಾಜನಂದಾ ಘಾರ್ಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಭಾ ಪಾಟೀಲ, ನೂತನ ಕುಲಕರ್ಣಿ, ರೇಣುಕಾ ಜಾಧವ, ಜ್ಯೋತಿ ಬದಾಮಿ, ಜಯಶೀಲಾ ಬ್ಯಾಕೋಡ, ದೀಪಿಕಾ ಚಾಟೆ , ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಇತರರಿದ್ದರು.
ಮಾಹೇಶ್ವರಿ ಶಾಲೆಯ ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು. ಜ್ಯೋತಿ ಮಾಳಿ ಸ್ವಾಗತಿಸಿದರು. ವಿದ್ಯಾ ಹುಂಡೆಕರ ನಿರೂಪಿಸಿದರು. ಪ್ರೇಮಾ ಪಾನಶೆಟ್ಟಿ ವಂದಿಸಿದರು.