ಮಾಂಜರಿ ಗ್ರಾಮದಲ್ಲಿ ಆಯೋಜಿಸಿದ್ದ ಬಾಲ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಮಂಜುನಾಥ ಭಾರತಿ ಸ್ವಾಮೀಜಿ, ಶ್ರೀಪಾದ ಗಿರಿ, ಮೋಹನ ಲೋಕರೆ, ಸನತ್‌ಕುಮಾರ ಪಾಟೀಲ ಇತರರಿದ್ದರು.
ಮಾಂಜರಿ: ಸಂತರು ಮತ್ತು ಋಷಿಮುನಿಗಳ ಶ್ರೇಷ್ಠ ಪರಂಪರೆ ಹೊಂದಿದ ಭಾರತದ ಸಂಸ್ಕೃತಿಯನ್ನು ರಕ್ಷಿಸುವುದರ ಜತೆಗೆ ಯುವ ಪೀಳಿಗೆಯಲ್ಲಿ ಮೌಲ್ಯ ತುಂಬುವುದು ಅಗತ್ಯ ಎಂದು ಬೆಂಗಳೂರು ಗೋಸಾವಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.
ಸಿದ್ಧಗಿರಿ ಸೇವಾ ಸಂಸ್ಥಾನ ಮಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಾಜಕೀಯವಿಲ್ಲದೆ ಧರ್ಮ ಮಾಡಿದರೆ ಯಶಸ್ಸು ಖಚಿತ. ಮರಾಠ ಸಮುದಾಯವು ಛಿದ್ರವಾಗಿದ್ದು, ಅದನ್ನು ಸಂಘಟಿಸಬೇಕಾಗಿದೆ. ಕರ್ನಾಟಕ ಸರ್ಕಾರ ಸ್ಥಾಪಿಸಿದ ಸ್ವತಂತ್ರ ಮರಾಠ ನಿಗಮ ಮಹಾಮಂಡಲವು ವಿವಿಧ ಯೋಜನೆ ಜಾರಿಗೆ ತರುತ್ತಿದೆ. ಇದರ ಲಾಭ ಪಡೆಯುವ ಮೂಲಕ ಮರಾಠ ಸಮುದಾಯವು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಸಬಲವಾಗಬೇಕು ಎಂದರು.
ಅಂಕಲಿಯ ಶ್ರೀಮಂತ ಮಹಾದಾದಾಜಿರಾಜೆ ಶಿತೋಳೆ, ಸನತ್‌ಕುಮಾರ ಪಾಟೀಲ, ಶ್ರೀಪಾದಗಿರಿ ಮಹಾರಾಜರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಲ ಸಂಸ್ಕಾರ ಶಿಬಿರಕ್ಕೆ ಧನ ಸಹಾಯ ಹಾಗೂ ಅನ್ನದಾನ ಮಾಡಿದವರನ್ನು ಸನ್ಮಾನಿಸಲಾಯಿತು.
ಪಿಕೆಪಿಎಸ್ ಅಧ್ಯಕ್ಷ ಮೋಹನ ಲೋಕರೆ, ಜಿಪಂ ಮಾಜಿ ಸದಸ್ಯ ಪಾಂಡುರಂಗ ಮಾನೆ, ಸುಮಿತ್ರಾ ಉಗಲೆ, ಅಮರ ಯಾದವ, ಅಶೋಕ ಕಳವೀರೆ, ರಾಮಚಂದ್ರ ಭೋಸಲೆ, ವಿಶ್ವಾಸ ರಸಾಳೆ, ವೀರಸಿಂಗ ಘೋರ್ಪಡೆ, ಅಶೋಕ ಹವಳೆ, ಅರ್ಜುನ ವಾಡಕರ, ಸುರೇಶ ರೆಂದಾಳೆ, ಪೋಪಟ್ ಲಾಮಕಾಣೆ, ಡಾ.ಜೆ.ಬಿ.ಮಾನೆ, ಡಾ.ವಿಜಯ ಉಪಾಧ್ಯೆ ಇತರರಿದ್ದರು. ಸತೀಶ ದಾಭೋಳೆ ನಿರೂಪಿಸಿದರು.