ಬೆಳಗಾವಿಯ ಇಸ್ಕಾಂನ್ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಭಕ್ತಿರಸಾಮೃತ ಸ್ವಾಮಿ ಮಹಾರಾಜ ಮಾತನಾಡಿದರು.
ಬೆಳಗಾವಿ : ಇಲ್ಲಿನ ಇಸ್ಕಾನ್ ವತಿಯಿಂದ ಜ.24ರಂದು ಹರೇಕೃಷ್ಣ ರಥಯಾತ್ರೆ ಆಯೋಜಿಸಲಾಗಿದ್ದು, ಈ ಸಂಬಂಧ ಎರಡು ದಿನಗಳ ಮಹೋತ್ಸವ ನಡೆಯಲಿದೆ ಎಂದು ಇಸ್ಕಾನ್ ಬೆಳಗಾವಿ ಅಧ್ಯಕ್ಷ ಭಕ್ತಿರಸಾಮೃತ ಸ್ವಾಮಿ ಮಹಾರಾಜ ತಿಳಿಸಿದರು.
ನಗರದ ಟಿಳಕವಾಡಿಯ ಇಸ್ಕಾನ್ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ (ಜ.24) ರಂದು ಮಧ್ಯಾಹ್ನ 1.30ಕ್ಕೆ ಹರೇಕೃಷ್ಣ ರಥಯಾತ್ರೆ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭಗೊಂಡು ಕಾಲೇಜ್ ರಸ್ತೆ, ಸಮಾದೇವಿ ಗಲ್ಲಿ, ಖಡೇಬಜಾರ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಪಾಟೀಲ ಗಲ್ಲಿ, ಕಪಿಲೇಶ್ವರ ರಸ್ತೆ, ಎಸ್‌ಪಿಎಂ ರಸ್ತೆ, ಶಹಾಪುರ, ನಾಥ ಪೈ ವೃತ್ತ, ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜ್ ಮುಂಭಾಗ, ಗೋವಾವೇಸ್ ಮೂಲಕ ಇಸ್ಕಾನ್ ಮಂದಿರ ತಲುಪಲಿದೆ ಎಂದರು.
ರಥೋತ್ಸವದ ಮುಂದೆ ಶ್ರೀಕೃಷ್ಣ ಲೀಲೆಗಳನ್ನು ಪ್ರತಿಬಿಂಬಿಸುವ ರೂಪಕ, ಸಾಂಪ್ರದಾಯಿಕ ಉಡುಪು ಧರಿಸಿದ ಮಕ್ಕಳು, ಅಲಂಕೃತ ಎತ್ತಿನ ಬಂಡಿಗಳ ಸಾಲು, ಗ್ರಂಥ ವಿತರಣೆ ಹಾಗೂ 50 ಸಾವಿರಕ್ಕೂ ಹೆಚ್ಚು ಪ್ರಸಾದ ಪಾಕೆಟ್, ಮಾರ್ಗದುದ್ದಕ್ಕೂ ನೀರು ಮತ್ತು ಶರಬತ್ತು ವಿತರಣೆ ಇರಲಿದೆ. ರಥೋತ್ಸವ ಮಾರ್ಗವನ್ನು ಆಕರ್ಷಕ ರಂಗೋಲಿ ಮತ್ತು ಧ್ವಜಗಳಿಂದ ಅಲಂಕರಿಸಲಾಗುವುದು ಎಂದು ಹೇಳಿದರು.
ಭಾನುವಾರ(ಜ.25) ಮಂದಿರದ ಹಿಂಭಾಗದ ಮೈದಾನದಲ್ಲಿ ನರಸಿಂಹ ಯಜ್ಞ, ಭಜನೆ, ಕಿರ್ತನೆ, ಪ್ರವಚನ ಆಧ್ಯಾತ್ಮಿಕ ನಾಟಕಗಳ ಪ್ರದರ್ಶನವಿರಲಿದೆ. ನಮ್ಮ ಗುರುಕುಲ ಶಾಲೆಯ ಮಕ್ಕಳು ಕಳೆದ ವರ್ಷ ಸಂಸ್ಕೃತದಲ್ಲಿ ‘ಭರತ ಚರಿತ್ರೆ’ ಕುರಿತಾದ ನಾಟ್ಯಲೀಲೆ ಪ್ರದರ್ಶಿಸಿದ್ದರು. ಈ ವರ್ಷವೂ ಒಂದು ವಿಶೇಷ ಚರಿತ್ರೆಯನ್ನು ಶುದ್ಧ ಸಂಸ್ಕೃತದಲ್ಲಿಯೇ ಪ್ರದರ್ಶಿಸಲಿದ್ದಾರೆ. ಮಹೋತ್ಸವದಲ್ಲಿ ಇಸ್ಕಾನ್ ಹಿರಿಯ ಸನ್ಯಾಸಿಗಳಾದ ಲೋಕನಾಥ ಸ್ವಾಮಿ ಮಹಾರಾಜ, ಮಾರಿಷಸ್‌ನ ಸುಂದರ ಚೈತನ್ಯ ಸ್ವಾಮಿ ಮಹಾರಾಜ, ಮುಂಬೈನ ದಯಾಲಚಂದ ಪ್ರಭು ಪಾಲೊಳ್ಳುವರು ಎಂದು ಭಕ್ತಿರಸಾಮೃತ ಸ್ವಾಮಿ ಮಹಾರಾಜ ವಿವರಿಸಿದರು.
ರಾಮಪ್ರಭು, ಚೈತನ್ಯ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.