ಕಲ್ಲೋಳ ಬಳಿ ಕಷ್ಣಾ ತೀರದಲ್ಲಿ ಕರಗಾಂವ ಏತ ನೀರಾವರಿ ಯೋಜನೆ ಮೊದಲ ಹಂತದ ಜಾಕ್‌ವೆಲ್ ಕಾಮಗಾರಿಗೆ ಶಾಸಕರಾದ ಡಿ.ಎಂ.ಐಹೊಳೆ ಹಾಗೂ ಗಣೇಶ ಹುಕ್ಕೇರಿ ಚಾಲನೆ ನೀಡಿದರು. ರವಿ ಮಿರ್ಜಿ, ಮಹಾವೀರ ಮೋಹಿತೆ, ಮಹೇಶ ಭಾತೆ ಇತರರಿದ್ದರು.
- ಕಲ್ಲೋಳ ಜಾಕ್‌ವೆಲ್ ಕಾಮಗಾರಿಗೆ ಚಾಲನೆ
- ಶಾಸಕ ಐಹೊಳೆ ಅಭಿಮತ
ಚಿಕ್ಕೋಡಿ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕರಗಾಂವ ಏತ ನೀರಾವರಿ ಯೋಜನೆ ರೈತರ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿತೀರದಲ್ಲಿ ಮೊದಲ ಹಂತದ ಜಾಕ್‌ವೆಲ್ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಅವರೊಂದಿಗೆ ಗುರುವಾರ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದರು. ಮಡ್ಡಿ ಭಾಗದ ಜನರು ನೀರಾವರಿಗಾಗಿ ಬಹುದಿನಗಳಿಂದ ಕಾಯುತ್ತಿದ್ದರು. ಶಾಸಕನಾಗಿ ಕರಗಾಂವ ಏತ ನೀರಾವರಿ ಯೋಜನೆಯ ಅನುಷ್ಠಾನ ಬೇಡಿಕೆ ಈಡೇರಿಸುವ ಕನಸು ನನಸಾಗಿದೆ ಎಂದರು.
ಕರಗಾಂವ ಏತ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕಲ್ಲೋಳ ಬಳಿ ಜಾಕ್‌ವೆಲ್ ನಿರ್ಮಾಣ ಮಾಡಲು ಎಂಎಲ್‌ಸಿ ಪ್ರಕಾಶ ಹುಕ್ಕೇರಿ. ಶಾಸಕ ಗಣೇಶ ಹುಕ್ಕೇರಿ ಹಾಗೂ ಸ್ಥಳೀಯ ರೈತರು ಸಹಕರಿಸಿದ್ದಾರೆ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಮಾತನಾಡಿ, ಚಿಕ್ಕೋಡಿ ತಾಲೂಕಿನ ಕರಗಾಂವ, ಡೊಣವಾಡ, ಕರೋಶಿ, ಬಂಬಲವಾಡ, ಬೆಣ್ಣಿಹಳ್ಳಿ, ಕಮತ್ಯಾನಟ್ಟಿ, ನಾಗರಮುನ್ನೋಳಿ, ಉಮರಾಣಿ, ಕಬ್ಬೂರ, ಬೆಳಕೂಡ, ಮುಗಳಿ, ಹಂಚಿನಾಳ, ಇಟ್ನಾಳ, ಕುಂಗಟೊಳ್ಳಿ ಗ್ರಾಮಗಳ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿದರು. ಮುಖಂಡರಾದ ರವಿ ಮಿರ್ಜೆ, ಸ್ಪೋಕೋ ಉಪಾಧ್ಯಕ್ಷ ಮಹೇಶ ಭಾತೆ, ಲಕ್ಷ್ಮಣ ಪೂಜೇರಿ, ಸಂಜಯಗೌಡ ಪಾಟೀಲ, ವೃಷಭ ಪಾಟೀಲ, ವಿನಾಯಕ ಕುಂಬಾರ, ರಾಜು ಕೊಟಗಿ, ಕಾಶೀನಾಥ ಕುರಣಿ, ಬಸವರಾಜ ಕುಂಬಾರ, ಶಿವಾನಂದ ಮರ‌್ಯಾಯಿ, ವಿರೂಪಾಕ್ಷ ಈಟಿ, ರಾಜು ಹರಗನ್ನವರ, ಸುರೇಶ ಬೆಲ್ಲದ, ವಿಜಯ ಕೋಠಿವಾಲೆ, ಅನಿಲ ಪಾಟೀಲ, ಶಂಕರಗೌಡ ಪಾಟೀಲ, ಸದಾಶಿವ ಘೋರ್ಪಡೆ, ಮುರಿಗೆಪ್ಪ ಅಡಿಸೇರಿ, ಅರುಣ ಮರ್ಯಾಯಿ, ಈರಗೌಡ ಪಾಟೀಲ, ದುಂಡಪ್ಪ ಬೆಂಡವಾಡೆ, ರಮೇಶ ಕಾಳನ್ನವರ ಇತರರಿದ್ದರು.
ರಾಜ್ಯ ಸರ್ಕಾರದಿಂದ ನೂರು ಕೋಟಿ ರೂ. ಬಿಡುಗಡೆ
ಕೆಲವೇ ವರ್ಷಗಳಲ್ಲಿ ಈ ಭಾಗದ ಜಮೀನು ಹಸಿರಿನಿಂದ ಕಂಗೊಳಿಸಲಿದೆ. ಚಿಕ್ಕೋಡಿ ತಾಲೂಕಿನ 14 ಗ್ರಾಮಗಳ 8,390 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಈ ಯೋಜನೆ ವೆಚ್ಚ 567 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರ 100 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ವಿದ್ಯುತ್ ಸಂಪರ್ಕ ಸಂಬಂಧಿತ ಕಾಮಗಾರಿ ಸೇರಿ 4 ಕಿ.ಮೀ. ಪೈಪಲೈನ್ ಮಾಡಲಾಗುತ್ತಿದೆ. 467 ಕೋಟಿ ರೂ. ಮೊತ್ತದಲ್ಲಿ 2ನೇ ಹಂತದ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಕೃಷ್ಣಾನದಿಯಿಂದ 0.77 ಟಿಎಂಸಿ ನೀರು ಹಂಚಿಕೆಯಾಗಿದೆ ಎಂದರು.