ಕೊಕಟನೂರ ಗ್ರಾಮದ ಹೊರಲಯದ ಶಿರಹಟ್ಟಿ ಸಂಪರ್ಕ ರಸ್ತೆ ಮೇಲಿನ ಸೇತುವೆಯ ಕಾಂಕ್ರಿಟ್ ರಸ್ತೆ ಕಿತ್ತು ಕಬ್ಬಿಣದ ಸಲಾಕೆಗಳು ಮೇಲೆದ್ದಿರುವುದು. 
ಬೆಳಗಾವಿ

ಸಂಚಾರಕ್ಕೆ ಕಬ್ಬಿಣ ಸಲಾಕೆ ಸಂಚಕಾರ

ಅರ್ಚನಾ ಜಾಧವ

ಪ್ರಮುಖ ಮುಖ್ಯಾಂಶಗಳು

  • ಕೊಕಟನೂರ ಹೊರವಲಯದ ಸೇತುವೆ
  • ರಸ್ತೆಯಲ್ಲಿ ಸಮಸ್ಯೆ ಕ್ರಮಕ್ಕೆ ಒತ್ತಾಯ
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿರುವ ಶಿರಹಟ್ಟಿ ಸಂಪರ್ಕ ರಸ್ತೆಗೆ ಅಡ್ಡಲಾಗಿರುವ ತುಂಗಳ-ಸಾವಳಗಿ ಏತ ನೀರಾವರಿ ಕಾಲುವೆಯ ಸೇತುವೆ ಮೇಲಿನ ಡಾಂಬರ್ ಕಿತ್ತು ಹೋದ ಪರಿಣಾಮ ಕಬ್ಬಿಣದ ಸಲಾಕೆಗಳು ಹೊರಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಸುಮಾರು ಹತ್ತು ವರ್ಷಗಳ ಹಿಂದೆ ತುಂಗಳ-ಸಾವಳಗಿ ಏತ ನೀರಾವರಿ ಮುಖ್ಯ ಕಾಲುವೆ ಸೇತುವೆ ಮೇಲೆ ಸಂಚಾರಕ್ಕಾಗಿ ರಸ್ತೆ ನಿರ್ಮಿಸಲಾಗಿತ್ತು. ಪ್ರಾರಂಭದ 3 ವರ್ಷ ಸಂಚಾರಕ್ಕೆ ಅನುಕೂಲವಾಗಿತ್ತಾದರೂ, ಭಾರಿ ಗಾತ್ರದ ವಾಹನಗಳ ಸಂಚಾರ ಮತ್ತು ಗುಣಮಟ್ಟದ ರಸ್ತೆ ಕಾಮಗಾರಿ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ರಸ್ತೆ ಹಾಳಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಸಕಾಲದಲ್ಲಿ ನಿರ್ವಹಣೆ ಮಾಡದ ಕಾರಣ ಡಾಂಬರ್ ಕಿತ್ತು ಕಬ್ಬಿಣದ ಸಲಾಕೆಗಳು ಎದ್ದು ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯೇ ಈ ಸಮಸ್ಯೆಗೆ ಕಾರಣ ಎನ್ನುವುದು ಸ್ಥಳೀಯರ ಆರೋಪ.
ಇದೀಗ ಕಬ್ಬು ಕಟಾವು ಭರದಿಂದ ಸಾಗಿದ್ದು, ಶಿರಹಟ್ಟಿ, ಬಳವಾಡ ಗ್ರಾಮದ ಸರಹದ್ದಿನಿಂದ ಪ್ರತಿದಿನ ನೂರಾರು ಕಬ್ಬು ತುಂಬಿದ
ಟ್ರ್ಯಾಕ್ಟರ್‌ಗಳು ರಸ್ತೆ ಮೇಲೆ ಸಂಚರಿಸುತ್ತವೆ. ರಸ್ತೆ ಮೇಲೆ ಕಬ್ಬಿಣದ ಸಲಾಕೆ ಎದ್ದಿರುವ ಕಾರಣ ವಾಹನ ಸಾವಾರರು ಸರ್ಕಸ್ ಮಾಡುವುದು ಸಾಮಾನ್ಯವಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳೂ ಸಾಕಷ್ಟಿವೆ. ಈ ರಸ್ತೆ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದರೂ ಕಾಮಗಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಿಪಂ ಅಧಿಕಾರಿಗಳು ಹೇಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಿ ಎಂಬುದು ಸವಾರರ ಒತ್ತಾಸೆಯಾಗಿದೆ.

ಕೊಕಟನೂರು ಹೊರವಲಯದ ತುಂಗಳ-ಸಾವಳಗಿ ಏತ ನೀರಾವರಿ ಕಾಲುವೆಯ ಸೇತುವೆ ಮೇಲೆ ರಸ್ತೆ ಹಾಳಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಶ್ರೀಘ್ರ ಕಾಮಗಾರಿ ಕೈಗೊಂಡು ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು.