ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವಿನಾಶ ಪೋತದಾರ ಮಾತನಾಡಿದರು. ಅರವಿಂದ ಗಾಯಕವಾಡ ಇದ್ದಾರೆ.
ಬೆಳಗಾವಿ : ಐಪಿಎಲ್ ಮ್ಯಾಚ್ ನಡೆಯದ ಪ್ರಮುಖ ನಗರಗಳಲ್ಲಿರುವ ಜನರಿಗೆ ಸ್ಥಳೀಯವಾಗಿ ಜನಸಮೂಹದ ಮಧ್ಯೆ ಮೈದಾನದಲ್ಲಿ ಕುಳಿತು ನೇರವಾಗಿಯೇ ಮ್ಯಾಚ್ ನೋಡುವ ಅನುಭವದ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ನಗರದ ಯುನಿಯನ್ ಜಿಮಖಾನಾ ಮೈದಾನದಲ್ಲಿ ಏ.18 ಮತ್ತು 19ರಂದು ಫ್ಯಾನ್ ಪಾರ್ಕ್ ವ್ಯವಸ್ಥೆ ಮಾಡಲಾಗಿದೆ ಎಂದು ಬಿಸಿಸಿಐ ಪ್ರತಿನಿಧಿ ಅರವಿಂದ ಗಾಯಕವಾಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಸಿಸಿಐನಿಂದ ದೇಶದ ಪ್ರಮುಖ ನಗರಗಳಲ್ಲಿ ಫ್ಯಾನ್ ಪಾರ್ಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಲ್ಲಿ ಬೆಳಗಾವಿ ಸಹ ಒಂದು. ಇದಕ್ಕಾಗಿ ಮೈದಾನದಲ್ಲಿ ಬೃಹತ್ ಪರದೇ ಅಳವಡಿಸಲಾಗುತ್ತದೆ. ಎರಡೂ ದಿನ ಮಧ್ಯಾಹ್ನ 2.30ಕ್ಕೆ ಗೇಟ್‌ಗಳು ತೆರೆಯಲಿದ್ದು, ಉಚಿತ ಪ್ರವೇಶ ಇರುತ್ತದೆ. ಶನಿವಾರದ ಆರ್‌ಸಿಬಿ-ದೆಹಲಿ ಕ್ಯಾಪಿಟಲ್ಸ್ ಮತ್ತು ಎಸ್‌ಆರ್‌ಎಚ್-ಸಿಎಸ್‌ಕೆ ಮ್ಯಾಚ್; ಭಾನುವಾರದ ದಿನ ಕೆಕೆಆರ್-ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ ಕಿಂಗ್ಸ್-ಎಲ್‌ಎಸ್‌ಜಿ ನಡುವಿನ ಆಟಗಳನ್ನು ವೀಕ್ಷಿಸಬಹುದು ಎಂದು ಹೇಳಿದರು.
ಕರ್ನಾಟಕ ಕ್ರಿಕೆಟ್ ಮಂಡಳಿ ಧಾರವಾಡ ವಲಯದ ಮಾಜಿ ಅಧ್ಯಕ್ಷ ಅವಿನಾಶ ಪೋತದಾರ ಮಾತನಾಡಿ, ಕಳೆದ ಆರು ವರ್ಷಗಳಿಂದ ಬೆಳಗಾವಿಯಲ್ಲಿ ಫ್ಯಾನ್ ಪಾರ್ಕ್ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆ ನೀಡುತ್ತಿದ್ದು, ಪ್ರತಿ ವರ್ಷವೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರಲ್ಲಿ ಆಹಾರ ಮಳಿಗೆಗಳನ್ನು ಸಹ ಇರಲಿದ್ದು, ಸಂಪೂರ್ಣವಾಗಿ ಮೈದಾನದಲ್ಲಿ ಜನಸಮೂಹದಲ್ಲಿ ಕುಳಿತು ನೇರವಾಗಿ ಮ್ಯಾಚ್ ನೋಡಿದ ಅನುಭವ ಪಡೆಯಬಹುದಾಗಿದೆ. ಇದು ಆಯಾ ತಂಡದ ಅಭಿಮಾನಿಗಳಿಗೆ ಒಳ್ಳೆಯ ಅವಕಾಶ ಒದಗಿಸಿಕೊಟ್ಟಂತಾಗಿದೆ ಎಂದು ಹೇಳಿದರು.