ಮುಗಳಖೋಡದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಭಾರತಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. 
ಬೆಳಗಾವಿ

ಜಗತ್ತಿಗೆ ಸಂಸ್ಕಾರದ ಬೆಳಕು ನೀಡಿದ ಭಾರತ

ಹಾರೂಗೇರಿ: ಜಗತ್ತಿಗೆ ಸಂಸ್ಕೃತಿ, ಸಂಸ್ಕಾರದ ಬೆಳಕು ನೀಡಿದ ಭಾರತ ಜಗತ್ತಿನ ವಿಶ್ವಗುರುವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಜೀ ಹೇಳಿದರು.
ಪಟ್ಟಣದ ಚನ್ನವೃಷಭೇಂದ್ರ ಲೀಲಾಮಠದ ಡಾ.ಶಿವಾನಂದ ಭಾರತಿ ಸಭಾಭವನದಲ್ಲಿ ಹಿಂದೂ ಪರಂಪರೆ, ಆಚರಣೆ, ಚಿಂತನೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಈಚೆಗೆ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಮಾತನಾಡಿ, ಸ್ವದೇಶಿ ಜೀವನ ಶೈಲಿ ಹಾಗೂ ನಾಗರಿಕ ಶಿಷ್ಟಾಚಾರಗಳ ಮೂಲಕ ಹಿಂದೂ ಸಮಾಜವನ್ನು ಒಗ್ಗೂಡಿಸಿ ವಿಶ್ವಮಟ್ಟದಲ್ಲಿ ಭಾರತವನ್ನು ವೈಭವಿಕರಿಸೋಣ ಎಂದರು.
ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮದ ಮೇಲೆ ಬೀಳುತ್ತಿರುವ ಪೆಟ್ಟಿನಿಂದ ಎಚ್ಚೆತ್ತುಕೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಭಿನ್ನಮತೀಯ ಭಾವನೆ ಬಿಟ್ಟು ಹಿಂದೂ ಧರ್ಮದ ಗಟ್ಟಿತನಕ್ಕೆ ಹೋರಾಡಬೇಕಿದೆ. ಅಖಂಡ ಭಾರತ ನನ್ನ ಮನೆ, ನನ್ನದು ಹಿಂದೂ ಧರ್ಮ ಎಂದು ಎದೆತಟ್ಟಿ ಹೇಳಿ ಎಂದರು. ಮುಗಳಖೋಡದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಭಾರತಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಸಿದ್ಧೇಶ್ವರ ಸ್ವಾಮೀಜಿ, ರಾಮಣ್ಣ ಮಹಾರಾಜರು, ಸ್ವರೂಪಾನಂದ ಸ್ವಾಮೀಜಿ, ಭರತೇಶ ಬನವಣೆ, ಜಯದೀಪ ದೇಸಾಯಿ, ವೆಂಕಟೇಶ ದೇಶಪಾಂಡೆ, ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಶ್ರೀಶೈಲ ಉಮರಾಣಿ, ಅಪ್ಪಾಸಾಬ ಕುಲಕರ್ಣಿ, ಭೀಮಗೌಡ ಕರ್ಣವಾಡಿ ಇತರರಿದ್ದರು. ಹನುಮಂತ ಯಲಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಐ.ಬಾಡಗಿ ನಿರೂಪಿಸಿದರು. ಮಲ್ಲಿಕಾರ್ಜುನ ಖಾನಗೌಡರ ವಂದಿಸಿದರು.