ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅವರನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸನ್ಮಾನಿಸಿದರು. ಶಾಸಕ ಆಸ್ೀ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಸಿಇಒ ರಾಹುಲ ಶಿಂಧೆ ಇತರರಿದ್ದರು. 
ಬೆಳಗಾವಿ

ಜಾಗತಿಕವಾಗಿ ಭಾರತ ಪ್ರಕಾಶಮಾನ

ಶಂಕರ ಗೆಜ್ಜಿ
ಬೆಳಗಾವಿ: ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದ್ದು, ದೂರದೃಷ್ಟಿಯ ನಾಯಕರಿಂದ ಸ್ವಾತಂತ್ರ್ಯ ಪಡೆದು, ತನ್ನದೇ ಸಂವಿಧಾನ ಅನುಷ್ಠಾನಗೊಳಿಸುವ ಮೂಲಕ ಪ್ರಬಲ ರಾಷ್ಟ್ರವಾಗಿ ಬೆಳೆದಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಅರಿಯುವುದು ಹಾಗೂ ಅದಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ದೇಶ ಆತ್ಮನಿರ್ಭರ ಭಾರತದತ್ತ ದೃಢ ಹೆಜ್ಜೆ ಇಟ್ಟಿದ್ದು, ಆಧುನಿಕ ಜಗತ್ತಿನ ಎಲ್ಲ ಅಗತ್ಯಗಳಿಗೆ ಸ್ಪಂದಿಸುವ ಶಕ್ತಿಯನ್ನು ಹೊಂದಿದೆ. ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಯುವಪೀಳಿಗೆ ಅತ್ಯುತ್ತಮ ಶಿಕ್ಷಣ ಪಡೆದು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕೆಎಲ್‌ಇ ನಿರ್ದೇಶಕಿ ಡಾ.ಪ್ರೀತಿ ದೊಡವಾಡ, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಜಂಟಿ ಕಾರ್ಯದರ್ಶಿ ಡಾ.ಸುನೀಲ ಜಲಾಲಪುರೆ, ಡಾ.ಪ್ರಕಾಶ ಕಡಕೋಳ ಹಾಗೂ ಸಂಸ್ಥೆಯ ಆಜೀವ ಸದಸ್ಯರು ಇತರರಿದ್ದರು.
ಅಭಿನಂದನೆಗಳ ಮಹಾಪೂರ
ಶೈಕ್ಷಣಿಕ, ಆರೋಗ್ಯ, ಕೃಷಿ, ಸಾಮಾಜಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ.ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ. ಈ ಹಿನ್ನೆಲೆ ನೂರಾರು ಅಭಿಮಾನಿಗಳು, ಹಾಲಿ, ಮಾಜಿ ಸಂಸದರು, ಶಾಸಕರು, ರಾಜಕೀಯ ಮುಖಂಡರು ಸೇರಿ ವಿವಿಧ ಸಂಘ- ಸಂಸ್ಥೆಗಳು, ಸಂಘಟನೆಗಳ ಪದಾಧಿಕಾರಿಗಳಿಂದ ಡಾ.ಕೋರೆ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.