ಮದ್ಯ ಗ್ಲಾಸ್‌ಗಳನ್ನು ಕೈಯಲ್ಲಿ ಎತ್ತಿಹಿಡಿದಿರುವುದು. 
ಬೆಳಗಾವಿ

ವರ್ಷಾಂತ್ಯಕ್ಕೆ ಹೆಚ್ಚಿದ ಗುಂಡಿನ ಗಮ್ಮತ್ತು!

ಬೆಳಗಾವಿ: ಜಿಲ್ಲೆಯಲ್ಲಿ ಸಾಲು ಸಾಲು ರಜೆ, ಹೊಸ ವರ್ಷಾಚರಣೆ ಹಿನ್ನೆಲೆ ಡಿಸೆಂಬರ್ ತಿಂಗಳಲ್ಲಿ 14.61 ಲಕ್ಷ ಲೀಟರ್ ಮದ್ಯ, 70 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ 1.20 ಲಕ್ಷ ಲೀ. ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 645 ಮದ್ಯದಂಗಡಿ ವ್ಯಾಪ್ತಿಯಲ್ಲಿ ಡಿ.31ರಂದು ಬೆಳಗ್ಗೆ 8ರಿಂದ ರಾತ್ರಿ 12 ಗಂಟೆ ಅವಧಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಹೊಸ ವರ್ಷಾಚರಣೆಗೆ ಮೂರು ದಿನಗಳ ಮುನ್ನ ಹೆಚ್ಚುವರಿಯಾಗಿ 13 ಸಾವಿರ ಬಾಕ್ಸ್ ಮದ್ಯ ಮಾರಾಟವಾಗಿದೆ. ಬೆಳಗಾವಿ ಮಹಾನಗರ, ಹೊರತುಪಡಿಸಿ ಗೋಕಾಕ, ಚಿಕ್ಕೋಡಿ, ಸವದತ್ತಿ, ರಾಮದುರ್ಗ, ಅಥಣಿ, ಮೂಡಲಗಿ ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.
ವರ್ಷದ ಕೊನೆಯ ದಿನ (ಡಿ.31) ಅಂದಾಜು 35,450 ಬಾಕ್ಸ್ (3,19,050 ಲೀಟರ್) ಮದ್ಯ ಮತ್ತು ಬಿಯರ್ ಮಾರಾಟವಾಗಿದೆ. ಸಾಮಾನ್ಯ ದಿನಗಳಲ್ಲಿ 10 ರಿಂದ 12 ಸಾವಿರ ಬಾಕ್ಸ್ ಮದ್ಯ ಮಾರಾಟ ಆಗುತ್ತಿತ್ತು. ಡಿಸೆಂಬರ್ ತಿಂಗಳಿನಲ್ಲಿ 1,62,344 ಲೀ. ಬಾಕ್ಸ್ ಮದ್ಯ ಹಾಗೂ 70,865 ಲೀ. ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 1,54,819 ಲೀ. ಬಾಕ್ಸ್ ಮದ್ಯ ಹಾಗೂ 75,904 ಲೀ. ಬಾಕ್ಸ್ ಬಿಯರ್ ಬಾಕ್ಸ್ ಮಾರಾಟವಾಗಿದ್ದವು. ಈ ಬಾರಿ ಮದ್ಯ ಮಾರಾಟದಲ್ಲಿ 15 ಸಾವಿರ ಬಾಕ್ಸ್ ಹೆಚ್ಚಳವಾಗಿದ್ದರೆ, ಬಿಯರ್ ಮಾರಾಟದಲ್ಲಿ 5ಸಾವಿರ ಬಾಕ್ಸ್ ಕುಸಿತ ಕಂಡುಬಂದಿದೆ. ಮದ್ಯ, ಬಿಯರ್ ದರ ಹೆಚ್ಚಳದಿಂದ ಆದಾಯದ ಪ್ರಮಾಣ ಶೇ.22ರಷ್ಟು ಹೆಚ್ಚಳವಾಗಿದೆ.
ಗೋವಾದಿಂದ ಬರುವ ಅಕ್ರಮ ಮದ್ಯ, ರಕ್ಷಣಾ ಇಲಾಖೆ ಮದ್ಯ ಮಾರಾಟ ಪ್ರಮಾಣ ಹೆಚ್ಚಿದ್ದರಿಂದ ರಾಜ್ಯ ಅಬಕಾರಿ ಇಲಾಖೆ ಆದಾಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಟೆಟ್ರಾ ಪ್ಯಾಕ್ ಮದ್ಯ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"

ಡಿಸೆಂಬರ್ ತಿಂಗಳಲ್ಲಿ ಮದ್ಯ ಮಾರಾಟ ಪ್ರಮಾಣದಲ್ಲಿ ಏರಿಕೆ ಮತ್ತು ಬಿಯರ್ ಮಾರಾಟದಲ್ಲಿ ಇಳಿಕೆ ಕಂಡಿದೆ. ಈ ತಿಂಗಳಲ್ಲಿ ಸಾಮಾನ್ಯ ದಿನಗಳಿಗಿಂತ ಮದ್ಯದ ಮಾರಾಟ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.