ಕಣಬರಗಿಯ ಕೆಪಿಎಸ್ ಸರ್ಕಾರಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟನೆ
ಗಡಿನಾಡಾದ ಬೆಳಗಾವಿಯ ಶತಮಾನೋತ್ಸವ ಕಂಡ ಕಣಬರಗಿಯ ಕೆಪಿಎಸ್ ಸರ್ಕಾರಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹತ್ತು ಹಲವು ಪರಿಸರ ಗೀತೆ, ನಾಡಗೀತೆ, ಕನ್ನಡ ಗೀತೆಗಳನ್ನು ಮಕ್ಕಳಿಗೆ ಹೇಳಿಕೊಟ್ಟು ಹಾಡಿಸಿ ಖುಷಿಪಡಿಸಿದರು.
ಆದರ್ಶ ಸುಗಮ ಸಂಗೀತ ಅಕಾಡೆಮಿ, ಕೆ.ಎಸ್.ನ. ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಪಂದನಾ ಫೌಂಡೇಶನ್ ಸಹಯೋಗದಲ್ಲಿ ಕಣಬರಗಿ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ಸಂಭ್ರಮದ ನೆನಪಿನಲ್ಲಿ ಕನ್ನಡ ಶಾಲೆ, ಪರಿಸರ ಉಳಿಸಿ, ಸುಗಮ ಸಂಗೀತಾ ತರಬೇತಿ ಅಭಿಯಾನ ಕಾರ್ಯಕ್ರಮದಲ್ಲಿ ನಾಡಗೀತೆ, ರೈತಗೀತೆಯನ್ನು ಮೊದಲು ಲಯಬದ್ಧವಾಗಿ ಮಕ್ಕಳು ಗಾಯಕರೊಂದಿಗೆ ಹಾಡಿ ಸಂಭ್ರಮಿಸಿದರು.
ಬೆಳಗಾವಿಯಲ್ಲಿ ಪ್ರಥಮವಾಗಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಆಗಮಿಸಿದ್ದ ಮಹಾತ್ಮ ಗಾಂಧೀಜಿ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಪ್ರಾರ್ಥನಾ ಗೀತೆಯನ್ನು ಕೇಳಿ ಪ್ರಭಾವಿತರಾದರು. ಈ ಗೀತೆಯನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿಸಿಕೊಂಡು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಹುಯಿಲಗೋಳ ನಾರಾಯಣರಾಯರನ್ನು ವೇದಿಕೆಯಲ್ಲಿ ಗೌರವಿಸಿದರು. ಈ ಗೀತೆ ಕನ್ನಡ ಸುಗಮ ಸಂಗೀತಕ್ಕೆ ಮೊದಲ ಗೀತೆಯಾಗಿದ್ದು ಈ ಕೀರ್ತಿ ಬೆಳಗಾವಿಗೆ ಸಲ್ಲುತ್ತದೆ. ಸುಗಮ ಸಂಗೀತ ಹಾಗೂ ನಾಡಗೀತೆಗೆ ನೂರು ವರ್ಷ ಸಂದಿದ್ದು, ಈ ಶತಮಾನೋತ್ಸವದ ನೆನಪಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲಾ ಕಾಲೇಜು, ಪರಿಸರ ಉಳಿಸಿ ಬೆಳಸುವ ಅಭಿಯಾನಕ್ಕೆ ನಾಂದಿಯಾಗಿದೆ.
ಪರಿಸರ ಪ್ರೇಮಿ ಮಾದಾಪುರ ಸುಬ್ಬಣ್ಣ ಮಾತನಾಡಿ ಹಸಿರಿದ್ದರೆ ಉಸಿರು. ಶುದ್ಧಗಾಳಿ, ಆರೋಗ್ಯಕರ ಬದುಕಿಗೆ ಮನೆಗೊಂದು ಮರಗಿಡ, ಶಾಲೆಯೊಂದು ವನವಾಗಿಸಲು ಪ್ರತಿಜ್ಞೆ ತೊಡಿ ಎಂದರು.
ಕಲಾವಿದ ಕೆ.ವಿ. ಬಲರಾಮು ಮಾತನಾಡಿ, ನಾಡು, ನುಡಿ, ಪರಿಸರ ಉಳಿಯಲು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮೊದಲು ಆಗಬೇಕಿದೆ ಎಂದು ನುಡಿದರು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಜೈಭಾರತ ಜನನಿಯ ತನುಜಾತೆ, ಉಳುವ ಯೋಗಿ ನೋಡಲ್ಲಿ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಎಲೆೆಗಳು ನೂರಾರು, ಗಿಡಮರ ಬೆಳೆಸೋಣಾ ಪರಿಸರ ಉಳಿಸೋಣಾ, ಗಿಡ ನೆಡಿ, ಗಿಡ ನೆಡಿ ಮನೆಯ ಮುಂದೆ ಒಂದು ಗಿಡ ನೆಡಿ, ಶಾಲೆಯ ಮುಂದೊಂದು ಗಿಡ ನೆಡಿ ಮತ್ತಿತರ ಗೀತೆಗಳನ್ನು ಮಕ್ಕಳಿಗೆ ಹೇಳಿಕೊಟ್ಟು ಮಧುರವಾಗಿ ಹಾಡಿಸಿ ಕನ್ನಡದ ಮನಸನ್ನು ಗಟ್ಟಿಗೊಳಿಸಿದರು.
ಮುಖ್ಯಶಿಕ್ಷಕಿ ಎನ್.ಬಿ. ಪಾಟೀಲ, ಅಂಜನಾ ಮುರುಗೋಡ, ರೂಪಾ ತಿಗಡಿ, ಸವಿತಾ ಜಡಗಿ, ಎಲ್. ಶಿವದೀಪ, ಪರಿಸರ ಪೇಮಿ ಪ್ರಕಾಶ ಭಾಗವಹಿಸಿದ್ದರು.
ಬೆಳಗಾವಿಯ ಕಣಬರಗಿ ಕೆಪಿಎಸ್ ಸರ್ಕಾರಿ ಶಾಲೆಯಲ್ಲಿ ಬುಧವಾರ ಆದರ್ಶ ಸುಗಮ ಸಂಗೀತ ಅಕಾಡೆಮಿ, ಕೆ.ಎಸ್.ನ. ಟ್ರಸ್ಟ್, ಸ್ಪಂದನಾ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಡಗೀತೆ, ಸುಗಮ ಸಂಗೀತಾ ಶತಮಾನೋತ್ಸವ ಸಂಭ್ರಮದ ನೆನಪಿನಲ್ಲಿ ಪರಿಸರ ಉಳಿಸಿ, ಕನ್ನಡ ಶಾಲೆ ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಗಣ್ಯರು ಗಿಡನೆಟ್ಟು ನೀರೆರೆದು ಪರಿಸರ ಜಾಗೃತಿ ಮೂಡಿಸಿದರು. ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಮಾದಾಪುರ ಸುಬ್ಬಣ್ಣ, ಕೆ.ವಿ. ಬಲರಾಮು, ಎನ್.ಬಿ. ಪಾಟೀಲ, ಅಂಜನಾ ಮುರುಗೋಡ, ರೂಪಾ ತಿಗಡಿ, ಸವಿತಾ ಜಡಗಿ, ಎಲ್. ಶಿವದೀಪ, ಪ್ರಕಾಶ ಭಾಗವಹಿಸಿದ್ದರು.