ಜಿಲ್ಲಾದ್ಯಂತ ಕಳ್ಳಬಟ್ಟಿ ಸಹಿತ ಮದ್ಯ ಅಕ್ರಮ ಮಾರಾಟ ಹಾಗೂ ಸಾಗಣೆಗೆ ಕಡಿವಾಣ ಇಲ್ಲದಂತಾಗಿದೆ. ಅಬಕಾರಿ ಇಲಾಖೆ ಜತೆಗೆ ಪೊಲೀಸರು ದಾಳಿ ಮಾಡುತ್ತಿದ್ದರೂ ದಂಧೆಕೋರರಿಗೆ ಭಯವಿಲ್ಲವಾಗಿದೆ. ಜಿಲ್ಲಾ ಕೇಂದ್ರ ಸ್ಥಾನದಲ್ಲೂ ಎಗ್ಗಿಲ್ಲದೆ ಕಳ್ಳಬಟ್ಟಿ ಪೂರೈಕೆಯಾಗುತ್ತಿದೆ. ಚಿಕ್ಕ ಹುಡುಗರೂ ಕಳ್ಳಬಟ್ಟಿ ವ್ಯಸನಿಗಳಾಗುತ್ತಿರುವುದು ಆತಂಕ ಸೃಷ್ಟಿಸಿದೆ.
ಈ ವರ್ಷ ಜೂನ್‌ವರೆಗೆ ಅಬಕಾರಿ ಇಲಾಖೆಯ ಬೆಳಗಾವಿ ದಕ್ಷಿಣ ಮತ್ತು ಉತ್ತರ(ಚಿಕ್ಕೋಡಿ) ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 95 ಪ್ರಕರಣಗಳಾಗಿವೆ. 43 ವಾಹನ(ಬೈಕ್ ಸಹಿತ) ಜಪ್ತಿ ಮಾಡಿ, 714 ಜನರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಎರಡೂ ಅಬಕಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1,115 ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಅನ್ಯರಾಜ್ಯದ 2,048 ಲೀ. ಮದ್ಯ ಅಕ್ರಮ ಮಾರಾಟ ಪತ್ತೆಯಾಗಿದೆ. ಇದರಲ್ಲಿ ಸಿಂಹಪಾಲು ಗೋವಾ ರಾಜ್ಯದ್ದೇ ಇದೆ. ಜತೆಗೆ ಡಿಫೆನ್ಸ್(35.25ಲೀ.) ಮದ್ಯವೂ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ. ಇದು ಅಬಕಾರಿ ಇಲಾಖೆ ಆದಾಯಕ್ಕೂ ಅಡ್ಡಿಯಾಗಿದೆ.
ಬಸ್ ಮೂಲಕ ಸಾಗಣೆ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಸಾಮಾನ್ಯ ಪ್ರಯಾಣಿಕರ ಸೋಗಿನಲ್ಲಿ ಹಳ್ಳಿ ಹಳ್ಳಿಗೆ ಗೋವಾ ಮದ್ಯ ರವಾನಿಸುವುದು ಕಂಡು ಬಂದಿದೆ. ಇದನ್ನು ನೋಡಿದರೆ, ಗೋವಾ-ಕರ್ನಾಟಕ ಮಧ್ಯದ ಗಡಿಯಲ್ಲಿ ಅಬಕಾರಿ ಇಲಾಖೆ ತಪಾಸಣೆ ಮಂದವಾಗಿದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆ. ಕಳೆದ ತಿಂಗಳಲ್ಲಿ ನಗರ ಪೊಲೀಸರು ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ನಡೆಸಿದ ದಾಳಿಗಳಲ್ಲಿ ಅಪಾರ ಗೋವಾ ಮದ್ಯ ಸಿಕ್ಕಿದೆ. ಮಹಿಳೆ ಬಳಿ 10,080 ರೂ. ಮೌಲ್ಯದ ಮದ್ಯದ ಬಾಟಲಿ, ಇನ್ನೋರ್ವಳ ಬಳಿ 30 ಲೀ. ಗೋವಾ ಮದ್ಯ ಸಿಕ್ಕಿರುವುದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ.
ಅನೇಕ ಹಳ್ಳಿಗಳ ಟೀ ಹಾಗೂ ಪಾನ್ ಶಾಪ್‌ಗಳಲ್ಲೂ ಮದ್ಯ ಸಿಗುತ್ತಿದೆ. ಅಧಿಕೃತ ಅಂಗಡಿಗಳ ಮೂಲಕವೇ ವ್ಯಾಪಾರ ನಡೆಯುತ್ತಿದ್ದು, ಇದರಿಂದ ಆದಾಯ ಬರುತ್ತಿದೆ ಎಂದು ಅಬಕಾರಿ ಇಲಾಖೆ ಸುಮ್ಮನೆ ಕುಳಿತುಕೊಂಡಂತಿದೆ. ಆದರೆ, ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ದಂಧೆಕೋರರು ಅಧಿಕೃತ ಮದ್ಯದ ಜತೆಗೆ ಗೋವಾ, ಡಿೆೆನ್ಸ್ ಮದ್ಯವನ್ನೂ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಬೆಳಗಾವಿ ನಗರದಲ್ಲಿ ಗಾಂಜಾ ಮತ್ತು ಹೆರಾಯಿನ್ ಮಾರಾಟ ಪತ್ತೆ ಕಾರ್ಯಾಚರಣೆಗಿಳಿದಿದ್ದ ಪೊಲೀಸರಿಗೆ ಈಚೆಗೆ ಕಳ್ಳಬಟ್ಟಿಯೂ ಸಿಕ್ಕಿದೆ. ಮಜಗಾವಿ ಕಲ್ಮೇಶ್ವರ ನಗರದಲ್ಲಿ 3 ಟ್ಯೂಬ್‌ಗಳಲ್ಲಿ 80 ಲೀ., ಮಾರಿಹಾಳ-ತುಮ್ಮರಗುದ್ದಿ ಕೆರೆ ಪಕ್ಕದಲ್ಲಿ ಓರ್ವ ಮಹಿಳೆಯಿಂದ 10 ಲೀ. ಕಳ್ಳಬಟ್ಟಿ ಜಪ್ತಿ ಮಾಡಿದ್ದಾರೆ.
ಆರು ತಿಂಗಳಿನಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಅತಿ ಹೆಚ್ಚು(471ಲೀ.) ಕಳ್ಳಬಟ್ಟಿ ಸಿಕ್ಕಿದೆ. ಬೆಳಗಾವಿ ವ್ಯಾಪ್ತಿಯಲ್ಲಿ 400.2 ಲೀ. ಕಳ್ಳಬಟ್ಟಿ ಪತ್ತೆಯಾಗಿದೆ. ಖಾನಾಪುರ ತಾಲೂಕಿನಲ್ಲಿ 14,000 ಲೀ. ಸ್ಪೀರಿಟ್ ಸಿಕ್ಕಿದೆ. ಮುಖ್ಯವಾಗಿ ಚಿಕ್ಕೋಡಿ ವ್ಯಾಪ್ತಿಯಲ್ಲಿ 126 ಲೀ. ಸೇಂದಿ ಸಹ ಜಪ್ತಿ ಮಾಡಿದ್ದಾರೆ.