ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಕೇಂದ್ರ ಲೋಕಸೇವಾ ಆಯೋಗ ( ಯುಪಿಎಸ್‌ಸಿ) ಶನಿವಾರ ಪ್ರಕಟಿಸಿರುವ ಭಾರತೀಯ ಅರಣ್ಯ ಸೇವೆ ( ಐಎಫ್‌ಎಸ್) ಪರೀಕ್ಷೆಯ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಬಡ ರೈತರ ಕುಟುಂಬದ ಕಿರಿಯ ಕುಡಿ ಬಸವರಾಜ್ ದರೇಪ್ಪ ಕೆಂಪವಾಡ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾನೆ.
ಸಾಮಾನ್ಯ ರೈತನ ಮಗನಾದ ಬಸವರಾಜ ಕೆಂಪವಾಡ 2024ರಲ್ಲಿ ಯುಪಿಎಸ್‌ಸಿಯ ಮೊದಲ ಪ್ರಯತ್ನದಲ್ಲಿ ಐಎಎಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಬಳಿಕ 2025ರಲ್ಲಿ ಎರಡನೇ ಪ್ರಯತ್ನದಲ್ಲಿಯೇ ಐಎಫ್‌ಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗುವ ಹೊಸ ಸಾಧನೆ ಯುವ ಸಮುದಾಯಕ್ಕೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ.
ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿರುವ ಬಸವರಾಜ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸವದಿ ಗ್ರಾಮದಲ್ಲಿ 1ರಿಂದ 5ನೇ ತರಗತಿ ಓದಿದರು. ಬಳಿಕ ರಾಯಬಾಗ ತಾಲೂಕಿನ ಅಳಗವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಓದಿದರು. 2017ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97.76ರಷ್ಟು ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಬಳಿಕ 2018ರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಯಲ್ಲಟ್ಟಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ತದನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿ.ಎಸ್ಸಿ (ಅರಣ್ಯ) ಪದವಿ 2023ರಲ್ಲಿ ಪಡೆದುಕೊಂಡರು.
ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿ ಆಗಬೇಕು ಎಂಬ ಏಕೈಕ ಉದ್ದೇಶದಿಂದ 2023ರಲ್ಲಿ ಪದವಿ ಮುಗಿಸಿದ ತಕ್ಷಣವೇ ಸ್ಪರ್ಧಾತ್ಮಕ ಪರೀಕ್ಷೆ ಸಿದ್ದತೆ ಆರಂಭಿಸಲಾಯಿತು. 2024ರಲ್ಲಿ ಪ್ರಥಮ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸಾಗಲಿಲ್ಲ. ಎರಡನೇ ಪ್ರಯತ್ನದಲ್ಲಿ ಐಎಫ್‌ಎಸ್ ಉತ್ತೀರ್ಣರಾಗಿದ್ದೇನೆ. ಸ್ವಯಂ ಅಧ್ಯಯನ, ಹಿರಿಯರ ಮಾರ್ಗದರ್ಶನ ಮತ್ತು ಅಚಲ ಆತ್ಮವಿಶ್ವಾಸ ಮಾತ್ರ.ಗ್ರಾಮೀಣ ಪ್ರದೇಶದಲ್ಲಿ ಕಲಿತ ನಾನು, ರೈತನ ಮಗನಾಗಿ ಈ ಹಂತ ತಲುಪಿರುವುದು ಅತೀವ ಸಂತಸ ತಂದಿದೆ. ಸತತ ಪ್ರಯತ್ನವೇ ನನ್ನ ಗೆಲುವಿನ ಗುಟ್ಟು ಎಂದು ಬಸವರಾಜಹರ್ಷ ವ್ಯಕ್ತಪಡಿಸಿದ್ದಾರೆ.
ನಮ್ಮದು ರೈತ ಕುಟುಂಬವಾಗಿದ್ದರಿಂದ ಕೃಷಿಯೇ ಜೀವಾನಾಧಾರವಾಗಿದೆ. 3 ಎಕರೆ ಜಮೀನಿನಲ್ಲಿ ಸರಳ ಜೀವನ ನಡೆಸಿಕೊಂಡು ಬರುತ್ತಿದ್ದೇನೆ. ಹಿರಿಯ ಸಹೋದರ ಸಿದ್ದು ಕೆಂಪವಾಡ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್‌ಸ್ಟೇಬಲ್ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ಮತ್ತು ತಾಯಿ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇದೀಗ ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವುದಕ್ಕೆ ಹೆತ್ತವರಿಗೆ ಖುಷಿಯಾಗಿದೆ ಎಂದು ಬಸವರಾಜ ವಿಜಯವಾಣಿ ದಿನಪತ್ರಿಕೆ ಜತೆಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ಕೋಚಿಂಗ್ ಅಥವಾ ತರಬೇತಿ ಅವಶ್ಯಕತೆ ಇಲ್ಲ. ಪರೀಕ್ಷೆಯ ಸಿದ್ದತೆ ಕುರಿತು ತಿಳಿದುಕೊಂಡರೆ ಸಾಕು. ಎಲ್ಲ ಪರೀಕ್ಷೆಗಳಿಗೆ ಕೋಚಿಂಗ್ ತೆಗೆದುಕೊಳ್ಳುವ ಬದಲು ಹಿರಿಯ ಮಾರ್ಗದರ್ಶನದಲ್ಲಿ ನಡೆಯಬೇಕು. ಪರೀಕ್ಷೆಯ ಸಿದ್ದತೆ ಆರಂಭಿಸಿದೆ ನಿರಂತರ ಓದುತ್ತಿರಬೇಕು. ಹೊಸ ಹೊಸ ವಿಷಯ ಕುರಿತು ಅಧ್ಯಯನ ಮಾಡಬೇಕು. ಪರೀಕ್ಷೆ ಎದುರಿಸಲು ಸತತ ಪ್ರಯತ್ನ, ಗುರಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಬಸವರಾಜ್ ಕೆಂಪವಾಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.