ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಕ್ತರೊಂದಿಗೆ ಕುಳಿತು ಗ್ರಂಥರಾಜ ಸಂಪ್ರದಾಯಿಕ ಪಾರಾಯಣ ಆಲಿಸಿದರು. 
ಬೆಳಗಾವಿ

ಜನ ಸೇವೆಯೇ ದೇವರ ಸೇವೆ ಎಂದು ನಂಬಿರುವೆ

ಡಿ.ವಿ. ಕಮ್ಮಾರ
ಬೆಳಗಾವಿ: ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟು, ಜನ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದು ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಮುತಗಾ ಗ್ರಾಮದಲ್ಲಿ ಜರುಗಿದ ಗ್ರಂಥರಾಜ ಸಾಂಪ್ರದಾಯಿಕ ಪಾರಾಯಣ ಸೋಹಳಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾದ್ವಿ ರುಕ್ಷ್ಮಿಣಿತಾಯಿ ಹಾವರೆಯವರ ಮಾತುಗಳನ್ನು ಆಲಿಸಿ ಮಾತನಾಡಿದ, ಕಳೆದ 25 ವರ್ಷದಿಂದ ಬೆಳಗ್ಗೆಯಿಂದ ರಾತ್ರಿಯವರೆಗೆ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ರೈತ ಕುಟುಂಬದಿಂದ ಬಂದು, ಸರ್ಕಾರಿ ಶಾಲೆಯಲ್ಲಿ ಕಲಿತು, ಸರಕಾರಿ ಬಸ್‌ನಲ್ಲಿ ಓಡಾಡಿ, ಹೆಚ್ಚು ಕಲಿಯಲು ಅವಕಾಶವಿಲ್ಲದಿದ್ದರೂ ಸಮಾಜ ಸೇವೆಯಿಂದಲೇ ಇಂದು ಈ ಹಂತಕ್ಕೆ ಬಂದಿದ್ದೇನೆ ಎಂದರು.
ಭಾರತ ಮಹಾನ್ ದೇಶ, ನಮ್ಮ ಸಂಸ್ಕೃತಿ ಉನ್ನತವಾದದ್ದು. ಮಕ್ಕಳಿಗೆ ನಮ್ಮ ಸಂಸ್ಕೃತಿ ಕುರಿತು ತಿಳಿಸಲು ಪಾಲಕರು ಸ್ವಲ್ಪ ಸಮಯ ಮೀಸಲಿಡಬೇಕು. ಮಹಾನ್ ಪುರುಷರ ಕುರಿತು, ಇತಿಹಾಸದ ಕುರಿತು ಮಕ್ಕಳಿಗೆ ತಿಳಿಸಬೇಕು. ನಾನು ಕಳೆದ 7 ವರ್ಷಗಳಲ್ಲಿ ಕ್ಷೇತ್ರದ 154 ಮಂದಿರಗಳ ಜೀರ್ಣೋದ್ದಾರ ಮಾಡಿದ್ದೇನೆ. ಬಹಳ ಭಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಸಾದ್ವಿ ರುಕ್ಷ್ಮಿಣಿತಾಯಿ ಹಾವರೆ ಅವರ ಸುಂದರ ಹಾಗೂ ಅರ್ಥಪೂರ್ಣ ಪಾರಾಯಣವು ಮನಸ್ಸಿಗೆ ಶಾಂತಿ ಮತ್ತು ಆಧ್ಯಾತ್ಮಿಕ ಚೈತನ್ಯವನ್ನು ನೀಡಿತು ಎಂದರು.
ಚೇತನ ಚೌಗುಲೆ, ಸಚಿನ ಪಾಟೀಲ, ಶಿವಾಜಿ ಪಾಟೀಲ, ಬಾಬು ಪಾಟೀಲ, ಯಲ್ಲಪ್ಪ ಕೇದಾರ್, ನಾಗೇಶ್ ದೇಸಾಯಿ, ಗಜಾನನ ಕಣಬರಕರ್, ರಾಯಣ್ಣ ಕಾಕಾ, ಶರದ, ಪಿಂಟು ಇತರರಿದ್ದರು.