ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಮಾತನಾಡಿ 
ಬೆಳಗಾವಿ

ರಾಜ್ಯಸಭೆ ಸದಸ್ಯನಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ

ಬೆಳಗಾವಿ:ರಾಜ್ಯಸಭೆಯ ಸದಸ್ಯನಾಗಿ ಆರು ವರ್ಷಗಳ ಕಾಲ ಜನಸಾಮಾನ್ಯರ ಧ್ವನಿಯಾಗಿ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ ವಿವಿಧ ಯೋಜನೆಗಳ ಅನುಷ್ಠಾನಗೊಳಿಸಲು ಶ್ರಮಿಸಿದ್ದೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತನೊಬ್ಬನ್ನು ರಾಜ್ಯಸಭೆಯ ಸದಸ್ಯನಾಗಿ ಆಯ್ಕೆ ಮಾಡಿದ್ದ ಬಿಜೆಪಿ ಪಕ್ಷದ ವರಷ್ಠರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವ ತೃಪ್ತಿಯಿದೆ ಎಂದರು.
ಕಳೆದ ಆರು ವರ್ಷದ ಅವಧಿಯಲ್ಲಿ ಸಿಎಸ್‌ಆರ್, ಡಿಎಂಎಫ್ ಸೇರಿ ವಿವಿಧ ಯೋಜನೆಗಳ ಹಾಗೂ ವಿವಿಧ ಇಲಾಖೆಗಳ ಅನುದಾನಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. 181 ಸಮುದಾಯ ಭವನ, 65 ಬಸ್ ಶೆಲ್ಟರ್, 11 ಸ್ಮಾರ್ಟ್ ಕ್ಲಾಸ್, 25 ಶಾಲಾ ಕಟ್ಟಡ, 3 ಅಂಬ್ಯೂಲೆನ್ಸ್, 4 ವ್ಯಾಯಾಮ ಶಾಲೆ, ಶವಸಂಸ್ಕಾರ ಕೇಂದ್ರ, ಶಾಲಾ ಪೀಠೋಪಕರಣ,ದೇವಸ್ಥಾನಗಳ ಜೀರ್ಣೋದ್ಧಾರ, ಬಡವರು, ಬೆಳಗಾವಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಟೆಂಡರ್ ಹಂತದಲ್ಲಿದೆ. ಆಕ್ಸಿಜನ್ ಘಟಕ ಸ್ಥಾಪನೆ, ಗೋಕಾಕದಲ್ಲಿ ಮಾಜಿ ಸೈನಿಕಾರಿಗಾಗಿ ಕ್ಯಾಂಟೀನ್, ಹಿಂದುಳಿದ ವರ್ಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಹೊಸ ಯೋಜನೆಗಳ ಜಾರಿಗೆ ತರಲು ಪ್ರಯತ್ನಿಸಿದ್ದೇನೆ. ರೈಲ್ವೆ, ಹೆದ್ದಾರಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರಿಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಯೂ ಶೀಘ್ರದಲ್ಲೇ ನಡೆಯಲಿದೆ. ಬೆಳಗಾವಿ ದಿಂದ ಧಾರವಾಡ ನೇರ ರೈಲ್ವೆ ಮಾರ್ಗದ ಯೋಜನೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲಸೌಲಭ್ಯ, ವಸತಿ ಯೋಜನೆ ಮನೆ ಮಂಜೂರು ಮಾಡಿಸಲಾಗಿದೆ. ಒಟ್ಟಿನಲ್ಲಿ ರಾಜ್ಯಸಭಾ ಸದಸ್ಯರ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದೇನೆ ಎಂದು ವಿವರಿಸಿದರು.
ರಾಜ್ಯಸಭೆಯ ಸದಸ್ಯನಾಗಿ ಎರಡನೇ ಅವಧಿಗೆ ಮುಂದುವರಿಸಲು ಯಾರ ಮೇಲೆ ಒತ್ತಡ ಹಾಕಿಲ್ಲ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಹಾಗೂ ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸಲು ಸಿದ್ಧನಾಗಿದ್ದೇನೆ. ಧಾರವಾಡ ಜಿಲ್ಲೆಯ ಹಾಲುಮತ ಸಮಾಜದ ಎಂ. ನಾಗರಾಜ ಅವರು ನೂತನ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿದೆ. ವಿಧಾನಪರಿಷತ್ ಸ್ಥಾನಕ್ಕೆ ಲಿಂಗರಾಜ ಪಾಟೀಲ, ರಘ ಕೌಟಿಲ್ಯ ಅವಕಾಶ ಕಲ್ಪಿಸಿರುವುದು ಸಂತೋಷವಾಗಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ರಾಜಶೇಖರ ಡೋಣಿ, ಮಹಾದೇವ ರಾಠೋಡ, ಎಫ್.ಎಸ್.ಸಿದಗೌಡರ ಇತರರಿದ್ದರು.
ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈರಣ್ಣಾ ಕಡಾಡಿ ಮಾತನಾಡಿದರು. ರಾಜಶೇಖರ ಡೋಣಿ, ಮಹಾದೇವ ರಾಠೋಡ, ಎಫ್.ಎಸ್.ಸಿದಗೌಡರ ಇತರರಿದ್ದರು.