ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಶನಿವಾರ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಶಿವಕ್ಕ ಬಸವರಾಜ ಜೋಡಳ್ಳಿ (33) ಕೊಲೆಯಾದವರು.
ಬಸವರಾಜ ಹಾಗೂ ಶಿವಕ್ಕ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಸೌಮ್ಯಾ, ಪ್ರವೀಣ ಹಾಗೂ ಪ್ರಭು ಎಂಬ ಮೂವರು ಮಕ್ಕಳಿದ್ದಾರೆ. ಆರೋಪಿ ಮದ್ಯಪಾನ ಮಾಡಿ, ಸಂಶಯದ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತ ಶಿವಕ್ಕ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದರು
ಮಗಳು ಸೌಮ್ಯಾಳನ್ನು ಆರೋಪಿ ಬೆಂಗಳೂರಿನಲ್ಲಿ ತನ್ನೊಂದಿಗೆ ಇರಿಸಿಕೊಂಡಿದ್ದ. ಶನಿವಾರ ಊರಿಗೆ ಬಂದು ಪತ್ನಿಯ ಜೊತೆಗೆ ಜಗಳ ತೆಗೆದು, ಕೂದಲು ಹಿಡಿದು ರಸ್ತೆಗೆ ಎಳೆದುಕೊಂಡು ಬಂದು ಹಲ್ಲೆ ನಡೆಸಿ, ದೊಡ್ಡ ಕಲ್ಲನ್ನು ತಲೆ ಮೇಲೆ ಹಾಕಿ ಕೊಲೆ ಮಾಡಿದ್ದಾನೆ.
ಬಿಡಿಸಲು ಬಂದ ಶಿವಕ್ಕ ಅವರ ತಂದೆ ಮೇಲೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಿಕೊಂಡಿರುವ ದೊಡವಾಡ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್‌ಐ ಎಚ್.ಕೆ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.