ಬೆಳಗಾವಿ :ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಪತ್ನಿಗೆ ವಿಷ ಬೆರೆಸಿದ ತಂಪು ಪಾನೀಯ ಕುಡಿಸಿ, ಬಳಿಕ ಕುತ್ತಿಗೆ ಹಿಸುಕಿ ಹತ್ಯೆ ಮಾಡಿ ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪತಿ ಸಂತೋಷ ಪಟಾಯಿತ (33)ನನ್ನು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಸಕ್ಕುಬಾಯಿ ಸಂತೋಷ ಪಟಾಯಿತ (32) ಮೃತ ಮಹಿಳೆ. ಪತ್ನಿಗೆ ತನ್ನ ಅಕ್ರಮ ಸಂಬಂಧದ ವಿಚಾರ ತಿಳಿದಿದ್ದರಿಂದ ಆರೋಪಿ ಆಕೆಯೊಂದಿಗೆ ಪದೇಪದೇ ಜಗಳ ಮಾಡುತ್ತಿದ್ದನು. ಈ ವಿಷಯವನ್ನು ತವರು ಮನೆಯವರಿಗೆ ತಿಳಿಸುವುದಾಗಿ ಸಕ್ಕುಬಾಯಿ ಹೇಳಿದ್ದರಿಂದ ಆಕೆಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದನು ಸಾಧ್ಯವಾಗಿರಲಿಲ್ಲ.
ಒಂದು ದಿನ ಕೊಲೆ ಉದ್ದೇಶದಿಂದಲೇ ಪತ್ನಿಯನ್ನು ಬೈಕ್‌ನಲ್ಲಿ ದೇವಸ್ಥಾನಕ್ಕೆ ಕರೆದೊಯ್ದ ಆರೋಪಿ, ವಾಪಸ ಬರುವಾಗ ಮುರಗೋಡದಲ್ಲಿ ತಂಪು ಪಾನೀಯದ ಬಾಟಲಿ ಖರೀದಿಸಿ ಅದರಲ್ಲಿ ವಿಷಕಾರಿ ಔಷಧ ಮಿಶ್ರಣ ಮಾಡಿದ್ದಾನೆ. ಬಳಿಕ ಅದನ್ನು ದೇವರ ಪ್ರಸಾದ ಎಂದು ನಂಬಿಸಿ ಪತ್ನಿಗೆ ಕುಡಿಸಿದ್ದಾನೆ. ಪರಿಣಾಮ ಅಸ್ವಸ್ಥತೆ ಕಾಣಿಸಿಕೊಂಡ ಬಳಿಕ ಶಿಲ್ತಿಬಾಂವಿ ಗ್ರಾಮದ ರಸ್ತೆ ಬದಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಬೈಕ್‌ನ್ನು ಆಕೆಯ ಮೇಲೆ ಬೀಳಿಸಿ ಅಪಘಾತದಲ್ಲಿ ಮೃತಪಟ್ಟಂತೆ ದೃಶ್ಯ ಸೃಷ್ಟಿಸಿದ್ದಾನೆ.ತಾನೂ ಅಪಘಾತದಲ್ಲಿ ಗಾಯಗೊಂಡವನಂತೆ ನಟಿಸಿದ ಆರೋಪಿ, 112ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದನು. ಕುಟುಂಬದವರಿಗೂ ರಸ್ತೆ ಅಪಘಾತದ ಕಥೆ ಹೇಳಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದನು.ಆದರೆ, ಆರೋಪಿಯ ನಡುವಳಿಕೆ, ಸಾಕ್ಷಿ ನಾಶಪಡಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅನುಮಾನಾಸ್ಪದ ಆಧಾರದ ಮೇಲೆ ವಿಚಾರಣೆಗೆ ಒಳಪಡಿಸಿದಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.