ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿ ಸ್ಥಗೀತಗೊಂಡಿದೆ.
ಬೆಳಗಾವಿ : ಮಹಾನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಆರಂಭವಾದ ಮಹತ್ವಾಕಾಂಕ್ಷಿ ಯೋಜನೆ ಸಮಸ್ಯೆ ಗೂಡಾಗಿ ಪರಿಣಮಿಸಿದೆ! ಕೆಲ ಭಾಗದಲ್ಲಿ ಕಾಮಗಾರಿ ಸ್ಥಗೀಗೊಂಡಿದ್ದು, ಯೋಜನೆ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
ಹೌದು. ನಗರದ 58 ವಾರ್ಡ್‌ಗಳಲ್ಲಿನ ಜನರಿಗೆ ದಿನದ 24 ಗಂಟೆಗಳ ಕಾಲ (24/7 )ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 2005ರಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ನಿರಂತರ ನೀರು ಸರಬರಾಜು ಯೋಜನೆಯನ್ನು ಪ್ರಾಯೋಗಿಕವಾಗಿ 10 ವಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಬಳಿಕ ಇನ್ನೂಳಿದ 48 ವಾರ್ಡ್‌ಗಳಿಗೆ 24/7 ಯೋಜನೆ ವಿಸ್ತರಿಸಲು 2018ರಿಂದಲೇ ಚಾಲನೆ ನೀಡಲಾಗಿದೆ. ಆದರೆ, ಇಲ್ಲಿಯವರೆಗೆ ಯೋಜನೆ ಅರ್ಧಭಾಗ ಕೂಡ ಪೂರ್ಣಗೊಂಡಿಲ್ಲ. 2025 ಡಿಸೆಂಬರ್ ಒಳಗಾಗಿ ನಾಗರಿಕರಿಗೆ ನೀರಿನ ಸೌಲಭ್ಯ ಕಲ್ಪಿಸಬೇಕಾಗಿತ್ತು.ಆದರೆ, 2026 ಡಿಸೆಂಬರ್ ವರೆಗೆ ಕಾಲವಕಾಶ ನೀಡುವಂತೆ ಎಲ್ ಆ್ಯಂಡ್ ಟಿ ಕಂಪನಿ ಸರ್ಕಾರಕ್ಕೆ ಪತ್ರ ಬರೆದಿದೆ.
ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 5.88 ಲಕ್ಷ ಜನರಿಗೆ , 256 ಹೋಟೆಲ್, 325ಕ್ಕೂ ಅಧಿಕ ಸಣ್ಣ ಮತ್ತು ಅತಿ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ನಿತ್ಯ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯ ಮತ್ತು ರಕ್ಕಸಕೊಪ್ಪ ಜಲಾಶದಿಂದ ಪ್ರತಿನಿತ್ಯ 108 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ ಕುಡಿಯಲು 75 ಎಂಎಲ್‌ಡಿ ಯಷ್ಟು ನೀರು ಬಳಕೆಯಾಗುತ್ತಿದೆ. ಎಲ್‌ಆ್ಯಂಡ್ ಟೀ ಕಂಪನಿ ಕೈಗೊಂಡಿರುವ ಕಾಮಗಾದಿಂದಾಗಿ ನಗರಕ್ಕೆ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ
ಈಗಾಗಲೇ ನಗರದಲ್ಲಿ 24*7 ಕುಡಿಯುವ ನೀರು ಯೋಜನೆಯ 900 ಕಿಮೀ ಉದ್ಧದ ಪೈಪಲೈನ್ ಪೈಕಿ ಇಲ್ಲಿಯವರೆಗೆ 620 ಕಿಮೀ ಕಾಮಗಾರಿ ಪೂರ್ಣಗೊಂಡಿದೆ. 80 ಸಾವಿರ ಮನೆಗಳ ಪೈಕಿ 24 ಸಾವಿರ ಮನೆಗಳಿಗೆ ಮಾತ್ರ ನಳ ಸಂಪರ್ಕ ಕಲ್ಪಿಸಿದೆ. ನೂರಾರು ಕೋಟಿ ರೂ. ಪಾವತಿಯಾಗಿದ್ದರೂ, ಪೈಪ್‌ಲೈನ್ ಅಳವಡಿಕೆ, ಸಂಪರ್ಕ ಕಾಮಗಾರಿ ಮತ್ತು ರಸ್ತೆ ಪುನರ್‌ಸ್ಥಾಪನೆ ಕೆಲಸಗಳು ಅರ್ಧಕ್ಕೇ ನಿಂತಿವೆ ಎಂದು ಪಾಲಿಕೆ ಸದಸ್ಯರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
..................................
ನಗರದ ಜನತೆಗೆ 24*7 ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಯೋಜನೆ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಶೇ.40ರಷ್ಟು ಕಾಮಗಾರಿ 2026 ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಲಾಗುವುದು. ದೊಡ್ಡ ಪೈಪಲೈನ್, ಟ್ಯಾಂಕರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮನೆಗಳಿಗೆ ನಳ ಸಂಪರ್ಕದ ಪೈಪಲೈನ್ ಕಾಮಗಾರಿ ಬಾಕಿ ಉಳಿದುಕೊಂಡಿದೆ.
-ದೀರಜ್.ಯು. ಅಧಿಕಾರಿ, ಎಲ್‌ಆ್ಯಂಡ್ ಟಿ ಕಂಪನಿ
.........................
ನಗರದ ತುಂಬೆಲ್ಲಾ ಕುಡಿಯುವ ನೀರಿನ ಯೋಜನೆಗಾಗಿ ಎಲ್‌ಆ್ಯಂಡ್ ಕಂಪನಿ ಅಗೆದಿರುವ ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ. ಕಾಮಗಾರಿ ವೇಗ ಹೆಚ್ಚಿಸುವಂತೆ ಎಚ್ಚರಿಕೆ ನೀಡಲಾಗಿದೆ.
-ಕಾರ್ತಿಕ್.ಎಂ., ಪಾಲಿಕೆ ಆಯುಕ್ತ