ತುಬಚಿಯಲ್ಲಿ ಹಮ್ಮಿಕೊಂಡಿದ್ದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಡಾ.ಅಲ್ಲಮಪ್ರಭು ಸ್ವಾಮೀಜಿ ಅವರನ್ನು ಶಿವಬಸವ ಸ್ವಾಮೀಜಿ ಸನ್ಮಾನಿಸಿದರು. ಶಾಂತವೀರ ಸ್ವಾಮೀಜಿ ಇತರರಿದ್ದರು.
- ಗಚ್ಚಿನಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ
- ಶರಣರ ಜೀವನ ದರ್ಶನ ಪ್ರವಚನ
ಅಥಣಿ: ಜಾತಿಯಿಂದ ಯಾರು ದೊಡ್ಡವರಾಗುವುದಿಲ್ಲ ಮಾನವೀಯ ಮೌಲ್ಯ, ಶ್ರೇಷ್ಠ ನಡೆಯಿಂದ ದೊಡ್ಡವರಾಗುತ್ತಾರೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ತುಬಚಿ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನಮಠದ ಶಿವಶರಣರ ಶಿಲಾಮಂಟಪ ಉದ್ಘಾಟನೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳಗಾವಿ ನಾಗನೂರು ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಜರುಗುತ್ತಿರುವ ಕಾರ್ಯಕ್ರಮಗಳು ಮಾದರಿಯಾಗಿವೆ. ಭಕ್ತರ ಸಹಕಾರದಿಂದ ಮಠವನ್ನು ಸುಂದರವಾಗಿ ನಿರ್ಮಿಸಿ, ಭಕ್ತರಿಗೆ ಜ್ಞಾನದಾಸೋಹ, ಅನ್ನದಾಸೋಹ, ಅರಿವು, ಆಚಾರ, ಅನುಭಾವದ ಅಮೃತವನ್ನು ನೀಡುತ್ತಿರುವ ಪೂಜ್ಯರ ಸೇವಾಕಾರ್ಯ ಶ್ಲಾಘನೀಯ ಎಂದರು.
ರಾಮದುರ್ಗ ಶಿವಮೂರ್ತೀಶ್ವರ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಮಠ, ಮಂದಿರಗಳು ಭಕ್ತರಿಗೆ ಧಾರ್ಮಿಕ ಕೇಂದ್ರಗಳಷ್ಟೇ ಅಲ್ಲದೆ ಶ್ರದ್ಧಾಕೇಂದ್ರಗಳಾಗಿವೆ. ಬಸವಣ್ಣವರ ಸಂದೇಶಗಳನ್ನು ಬಿತ್ತರಿಸುತ್ತ ಭಕ್ತರನ್ನು ಸನ್ಮಾರ್ಗದತ್ತ ಮುನ್ನಡೆಸುವ ಕಾರ್ಯವನ್ನು ಶಿವಲಿಂಗೇಶ್ವರ ಮಠದ ಮಠಾಧೀಶರು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಶೇಗುಣಿಸಿ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಎಲ್ಲರೂ ಆಧ್ಯಾತ್ಮಿಕ ಚಿಂತನೆಯಲ್ಲಿ ಪಾಲ್ಗೊಳ್ಳಬೇಕು. ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಹೊಂದಲು ಉತ್ತಮ ಕಾರ್ಯದಲ್ಲಿ ತೊಡಗಬೇಕು. ಪ್ರೇರಕಶಕ್ತಿಯಾಗಿ ಗುರು ಮಾರ್ಗದರ್ಶನ ಇರಬೇಕು ಎಂದರು.
ಬೆಳಗಾವಿ ನಾಗನೂರು ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಸಮಾಜಮುಖಿ ಕೆಲಸಗಳಿಗೆ ಭಕ್ತರ ಬೆಂಬಲ ಸದಾ ಇರುತ್ತದೆ ಎಂದರು. ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರ ಸಂದೇಶಗಳನ್ನು ನಾಡಿಗೆ ಪ್ರಸರಿಸುವಲ್ಲಿ ಮಠ, ಮಾನ್ಯಗಳ ಕೊಡುಗೆ ಅಪಾರ ಎಂದರು. ವೀರೇಶ ಮಳಲಿ, ಸದಾಶಿವ ಸಪ್ಲಡ, ರಮೇಶ ಕುಂಬಾರ, ಸದಾಶಿವ ಕುಂಬಾರ ಇತರರು ಇದ್ದರು.