ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವ ಅಂಗವಾಗಿ ಏರ್ಪಡಿಸಿದ್ದ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ದುರ್ಯೋಧನ ಐಹೊಳೆ, ಪ್ರಕಾಶ ಹುಕ್ಕೇರಿ, ಕೆ.ಪಿ.ಮಗೆನ್ನವರ, ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀಕಂಠ ಶಿವಾಚಾರ್ಯರು ಇತರರಿದ್ದರು.
ಮಾಂಜರಿ: ಮಾನವ ಜೀವನ ಶಾಶ್ವತವಲ್ಲ. ಆದರೆ, ಮನುಷ್ಯ ಮಾಡಿದ ಸತ್ಕಾರ್ಯಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಶ್ರೀಶೈಲ ಪೀಠದ ಜಗದ್ಗುರು, ಯಡೂರಿನ ಕಾಡಸಿದ್ಧೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಯಡೂರಿನ ವೀರಭದ್ರ ದೇವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಧರ್ಮಜಾಗೃತಿ ಹಾಗೂ ಸಾಂಸ್ಕೃತಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾನವ ಜೀವನ ಜನ್ಮಜನ್ಮಗಳ ಪುಣ್ಯಫಲದಿಂದ ದೊರೆಯುತ್ತದೆ. ಅರಿವು, ಆದರ್ಶ ಮತ್ತು ಮೌಲ್ಯಗಳಿಂದ ಮನುಷ್ಯನ ಬದುಕು ಸಮೃದ್ಧಗೊಳ್ಳಬೇಕು. ಹುಟ್ಟು ಮನುಷ್ಯನಿಗೆ ಸಹಜವಾದಂತೆ ಮರಣ ಅನಿವಾರ್ಯ. ಹುಟ್ಟು ಮತ್ತು ಸಾವಿನ ಮಧ್ಯದ ಜೀವನವನ್ನು ಸಾರ್ಥಕವಾಗಿ ರೂಪಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಅಂಬಿಕಾನಗರದ ಈಶ್ವರ ಪಂಡಿತರಾಧ್ಯ ಶಿವಾಚಾರ್ಯರು, ನೂಲಿನ ಗುರುಸಿದ್ಧೇಶ್ವರ ಶಿವಾಚಾರ್ಯರು, ಅನ್ನದಾನ ಶಾಸ್ತಿಗಳು, ನಾಗನಸೂರಿನ ಶ್ರೀಕಂಠ ಶಿವಾಚಾರ್ಯರು, ಮಠದ ಉತ್ತರಾಽಕಾರಿ ರೇಣುಕದೇವರು, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಕೆ.ಪಿ.ಮಗೆನ್ನವರ, ಸಿದ್ಧರಾಮೇಶ್ವರ ಉಕ್ಲಿ, ಮಲಗೌಡ ಜಾರೆ ಇದ್ದರು. ಶಿವಾನಿ ಶಿವದಾಸ್ ಸ್ವಾಮಿ, ಶೋಭಾ ಹೊನವಾಡ ಗಾಯನ ಗಮನಸೆಳೆಯಿತು. ಶಿವಾನಂದ ಅಂಜಿ ಸ್ವಾಗತಿಸಿ, ವಿವೇಕಾನಂದ ದೇವರು ನಿರೂಪಿಸಿ, ಮಲ್ಲಪ್ಪ ಸಿಂಧೂರ ವಂದಿಸಿದರು.