ಸವದತ್ತಿಯ ಹೋಟೆಲ್‌ನಲ್ಲಿ ಕಟ್ಟಿಗೆ ಒಲೆ ಮೇಲೆ ತಿಂಡಿ ತಯಾರಿಸುತ್ತಿರುವ ದೃಶ್ಯ.
- ಸೌದೆ ಒಲೆ ಮೇಲೆ ಅಡುಗೆ ಮಾಡಲು ಬಾಣಸಿಗರ ಪರದಾಟ
ಬೆಳಗಾವಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವ ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿನ ಅನೇಕ ಹೋಟೆಲ್‌ಗಳು ಸೋಮವಾರ ಬಾಗಿಲು ಮುಚ್ಚಿವೆ. ನಗರದ ಆರ್‌ಪಿಡಿ ವೃತ್ತದಲ್ಲಿನ ಅಜಂತಾ ಹೋಟೆಲ್ ಸೇರಿದಂತೆ ಐದಾರು ಹೋಟೆಲ್ ಬಂದ್ ಆಗಿವೆ. ಹಬ್ಬದ ಸಂದರ್ಭದಲ್ಲಿ ಬಹುತೇಕ ಹೋಟೆಲ್‌ಗಳು ಹೋಳಿಗೆ ಮಾಡಬೇಕು.
ಆದರೆ ಗ್ಯಾಸ್ ಕೊರತೆಯಿಂದ ಹಬ್ಬದ ಅಡುಗೆ ಮಾಡಲು ಆಗುವುದಿಲ್ಲವೆಂಬ ಕಾರಣಕ್ಕೆ ಹಬ್ಬದ ಮುಂಚೆಯೇ ಹೋಟೆಲ್ ಬಂದ್ ಮಾಡುತ್ತಿದ್ದಾರೆ. ಹಲವು ಹೋಟೆಲ್‌ಗಳಲ್ಲಿ ದೋಸೆ, ಪುರಿ ಮಾಯವಾಗಿದೆ. ಇಡ್ಲಿ ಬೇಯಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಹಬ್ಬದ ಒಂದು ವಾರ ಹೋಟೆಲ್‌ಗಳನ್ನು ಬಂದ್ ಮಾಡಿ ಊರಿಗೆ ಹೋಗಿ ಹಬ್ಬ ಮಾಡೋಣ ವೆಂದು ಅನೇಕರು ಹೋಟೆಲ್‌ಗೆ ಬಾಗಿಲು ಹಾಕುತ್ತಿದ್ದಾರೆ. ಕಾರ್ಮಿಕರು ತಮ್ಮೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸವದತ್ತಿ ವರದಿ: ಸವದತ್ತಿ ನಗರದಲ್ಲಿ ಹಲವು ಹೋಟೆಲ್‌ಗಳು ಸೌದೆ ಒಲೆ ಮೊರೆ ಹೋಗಿವೆ. ಎಷ್ಟೋ ಕಡೆ ಬಾಣಸಿಗರು ಕಟ್ಟಿಗೆ ಒಲೆ ಅಡುಗೆ ಮಾಡುವುದಕ್ಕೆ ಬಾರದೇ ಪರದಾಡುವಂತಾಗಿದೆ.
ಹೀಗಾಗಿ ಹೋಟೆಲ್ ನಡೆಸುವುದು ಕಷ್ಟವಾಗುತ್ತಿದೆ ಎಂದು ನಗರದ ಶಿವಾನಿ ಹೋಟೆಲ್ ಮ್ಯಾನೇಜರ್ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.