ವೆಂಕಟಾಪುರದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ
ಧಾರ್ಮಿಕ ಸುಕ್ಷೇತ್ರವೆಂದೇ ಪ್ರಸಿದ್ಧಿಯಾದ ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹೇಮ ವೇಮ ಕಮಿಟಿ ವತಿಯಿಂದ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮಹೋತ್ಸವ ಎರಡು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ವೈಭವದೊಂದಿಗೆ ಸೋಮವಾರ ಸಂಪನ್ನವಾಯಿತು.
ಮೇ 10 ಮತ್ತು 11ರಂದು ನಡೆದ ಕಾರ್ಯಕ್ರಮಗಳಲ್ಲಿ ವಿಶೇಷ ಪ್ರವಚನ, ಕುಂಭಮೇಳ, ಹೇಮರೆಡ್ಡಿ ಮಲ್ಲಮ್ಮ ಹಾಗೂ ವೇಮವ ಅವರ ಭಾವಚಿತ್ರಗಳ ಭವ್ಯ ಮೆರವಣಿಗೆ, ಮಹಾಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಭಕ್ತರ ಗಮನ ಸೆಳೆದವು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ನೂರಾರು ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮೆರುಗು ತಂದರು.
ಇಂಚೇಗೇರಿ ಮಠದ ಶಶಿಕಾಂತ ಗುರೂಜಿ ಮಾತನಾಡಿ, “ಜಗತ್ತಿಗೆ ಅನ್ನ ನೀಡುವ ರೈತ ಸಮುದಾಯ ಇಂದು ಸಂಕಷ್ಟದ ಬದುಕು ನಡೆಸುತ್ತಿದೆ. ಕೃಷಿ ಭೂಮಿಗೆ ಬಂಗಾರದ ಬೆಲೆ ಬಂದರೂ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ದುಡಿಯುವ ಬದುಕಿಗಿಂತ ಐಷಾರಾಮಿ ಜೀವನದ ಕಡೆ ಜನರು ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ಭೂಮಿ ಹೊಂದಿದವನೇ ಜಗತ್ತನ್ನು ಆಳುವ ಕಾಲ ಬರುತ್ತದೆ” ಎಂದು ಅಭಿಪ್ರಾಯಪಟ್ಟರು.
ಕಕಮರಿ ರಾಯಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಮಾತನಾಡಿ, “ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶ, ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಮೂಲಕ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಬೇಕು” ಎಂದು ಹೇಳಿದರು.
ಜಯಂತಿ ಮಹೋತ್ಸವದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಿ ಭಾವದಿಂದ ಸಾಕ್ಷಿಯಾದರು.
ಲಕ್ಷ್ಮಣ ದೇವರು, ಕಾವ್ಯಶ್ರೀ ಅಮ್ಮ , ವೇಮ ಹೇಮ ಟ್ರಸ್ಟ್ ಪದಾಧಿಕಾರಿಗಳು,ಗ್ರಾಮಸ್ಥರು ಇತರರಿದ್ದರು.