ಬೆಳಗಾವಿ ವಿಶ್ವಕರ್ಮ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಹೆಸ್ಕಾಂ ಎಇ ಅರವಿಂದ ಗದಗಕರಗೆ ಸನ್ಮಾನಿಸಲಾಯಿತು. ರಾಜೀವ ಪಂಡಿತ, ಪ್ರಭಾಕರ ಬಡಿಗೇರ, ಪ್ರದೀಪ ಪತ್ತಾರ, ಮೌನೇಶ ದೇಶನೂರ, ಇತರರಿದ್ದರು.
ಬೆಳಗಾವಿ : ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಗುರುತಿಸಿ, ಉನ್ನತ ವ್ಯಾಸಂಗಕ್ಕೆ ಸಹಾಯ ಮತ್ತು ಸಹಕಾರ ಮಾಡುವುದು ಆಯಾ ಸಮುದಾಯದ ಜವಾಬ್ದಾರಿಯಾಗಿದೆ. ಇದೇ ರೀತಿ ತಮಗೆ ಸಿಗುವ ಸಮುದಾಯದ ಸಹಾಯವನ್ನೇ ಸದುಪಯೋಗ ಮಾಡಿಕೊಂಡು ಭವಿಷ್ಯದಲ್ಲಿ ಇತರರಿಗೆ ಸಹಾಯವಾಗುವ ರೀತಿಯಲ್ಲಿ ಪ್ರತಿಭಾವಂತರು ಬೆಳೆಯಬೇಕು ಎಂದು ಹೆಸ್ಕಾಂ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅರವಿಂದ ಗದಗಕರ ಹೇಳಿದರು.
ಕಾಳಿ ಅಂಬ್ರಾಯಿ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಮಂಗಳವಾರ ಜರುಗಿದ ಪಾಲಕರಿಲ್ಲದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಪುಸ್ತಕ ವಿತರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬೆಳಗಾವಿಯಂತಹ ದೊಡ್ಡ ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷ ಪ್ರಭಾಕರ ಬಡಿಗೇರ ಮಾತನಾಡಿ, ಪ್ರತಿ ವರ್ಷ ಪ್ರತಿಭಾ ಪುರಸ್ಕಾರದ ಜತೆಗೆ ಪಾಲಕರಿಲ್ಲದ ಮತ್ತು ಬಡ ವಿದ್ಯಾರ್ಥಿಗಳ ಓದಿಗೆ ಸಹಾಯಧನ ನೀಡುತ್ತ ಬಂದಿದ್ದೇವೆ. ಇದಕ್ಕೆ ಸಮುದಾಯದಲ್ಲಿರುವವರೇ ದಾನಿಗಳಾಗಿ ಕೈಜೋಡಿಸುತ್ತ ಬಂದಿದ್ದಾರೆ. ಈ ವರ್ಷ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಸಹಾಯ ಯಾಚಿಸಿದ್ದರು. ಎಲ್ಲರಿಗೂ ನೆರವಾಗುವಲ್ಲಿ ಸಂಘ ಯಶಸ್ವಿಯಾಗಿದೆ. ಸಂಘದ ಸಭಾಭವನ ಸದಾಕಾಲ ಚಟುವಟಿಕೆಯಿಂದ ಇರಲು ಶಟಲ್ ಬಾಡ್ಮಿಂಟನ್ ಕೋಟ್ ಆರಂಭಿಸಲಾಗಿದೆ ಎಂದು ಹೇಳಿದರು.
ಮಹಿಳಾ ಪದಾಧಿಕಾರಿಗಳಿಂದ ಅಧಿಕ ಮಾಸದ ಪ್ರಯುಕ್ತ ಸಾಮೂಹಿಕ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮ ಪಾರಾಯಣ, ಉಡಿ ತುಂಬುವ ಕಾರ್ಯಕ್ರಮ ಜರುಗಿತು. ರಾಜೀವ ಪಂಡಿತ, ದತ್ತಾ ಅಂಬೇವಾಡಿಕರ, ಮೌನೇಶ ದೇಶನೂರ, ಪ್ರದೀಪ ಪತ್ತಾರ, ಮೋಹನ ಬಡಿಗೇರ, ಎಂ.ಕೆ.ಬಡಿಗೇರ, ಮುರಳಿ ಸುತಾರ, ಪತ್ರಿಕಾ ಛಾಯಾಗ್ರಾಹಕ ಪಿ.ಕೆ.ಬಡಿಗೇರ, ಪತ್ರಕರ್ತ ಡಿ.ವಿ.ಕಮ್ಮಾರ ವೇದಿಕೆಯಲ್ಲಿದ್ದರು. ಜಿ.ಎಸ್.ಸೋನಾರ ಸ್ವಾಗತಿಸಿದರು. ರಾಮಕೃಷ್ಣ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಪಂಚಾಳ ವಂದಿಸಿದರು.