ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು. ಸಂಸದ ಜಗದೀಶ ಶೆಟ್ಟರ, ಶಾಸಕ ನಿಖಿಲ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಮಹಾವೀರ ನಿಲಜಗಿ ಇತರರಿದ್ದರು.
ಹುಕ್ಕೇರಿ: ಸಹಕಾರ ತತ್ತ್ವದಡಿ ವಿದ್ಯುತ್ ಸರಬರಾಜು ಮಾಡುತ್ತಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಹಕಾರ ನೀಡುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಪಟ್ಟಣದಲ್ಲಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ವಿದ್ಯುತ್ ಸಹಕಾರ ಸಂಘಕ್ಕೆ ನೀಡಬಹುದಾದ ಅನುದಾನದ ಕುರಿತು ಕ್ರಿಯಾಯೋಜನೆ ತಯಾರಿಸಿ ಇಲಾಖೆಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಸಂಸದ ಜಗದೀಶ ಶೆಟ್ಟರ ಮಾತನಾಡಿ, ಸರ್ಕಾರ ಅಧಿಕಾರದಾಹದಲ್ಲಿ ಜನರ ಸಮಸ್ಯೆ ಮರೆತಿದೆ. ಕೇಳೋರು ಹೇಳೋರು ಇಲ್ಲದಂತಾಗಿದೆ. ತಕ್ಷಣ ಜನರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಹೋರಾಟಕ್ಕಿಳಿಯಬೇಕಾಗುತ್ತದೆ. ಸಕ್ಕರೆ ಮತ್ತು ಎಥೆನಾಲ್ ರಪ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬರುವ ಆದಾಯ ಗಮನಿಸಿ ಎಂಎಸ್‌ಪಿ ಹೆಚ್ಚಿಸಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ನಿಖಿಲ ಕತ್ತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದ ತೋಟಪಟ್ಟಿ ನಿವಾಸಿಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುದಾನ ಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಸಂಸದ ರಮೇಶ ಕತ್ತಿ ವಿದ್ಯುತ್ ಸಹಕಾರ ಸಂಘದ ಕಾರ್ಯನಿರ್ವಹಣೆ ಕುರಿತು ವಿವರಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಸಂಸದ ಜಗದೀಶ ಶೆಟ್ಟರ ಅವರನ್ನು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ್ ಮುನ್ನೋಳಿ, ನಿರ್ದೇಶಕರಾದ ಪೃಥ್ವಿ ಕತ್ತಿ, ಕಲಗೌಡ ಪಾಟೀಲ, ಸತ್ಯಪ್ಪ ನಾಯಿಕ, ಗಜಾನನ ಕ್ವಳ್ಳಿ, ಶಿವಾನಂದ ಮುಡಶಿ, ಕೆಂಪಣ್ಣ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಬಸವಣ್ಣಿ ಲಂಕೆಪ್ಪಗೋಳ, ಎಂಡಿ ರವೀಂದ್ರ ಪಾಟೀಲ, ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪುರೆ ಇತರರಿದ್ದರು.