ಲಕ್ಷ್ಮೀ ಹೆಬ್ಬಾಳ್ಕರ್  
ಬೆಳಗಾವಿ

ಸಿಲಿಂಡರ್ ಬೆಲೆ ಏರಿಕೆಗೆ ಹೆಬ್ಬಾಳ್ಕರ್ ಆಕ್ರೋಶ

ಬೆಳಗಾವಿ: ಕಳೆದ ಮೂರು ತಿಂಗಳಲ್ಲೇ ಇದು ಎರಡನೇ ಸಲ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಮಾರ್ಚ್‌ನಲ್ಲಿ 60 ರೂ. ಹೆಚ್ಚಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಬೆಲೆಯನ್ನು 29ರೂ. ಹೆಚ್ಚಿಸಿರುವುದು ಖಂಡನೀಯ ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಮೂರು ತಿಂಗಳಲ್ಲಿ ಒಟ್ಟು 89 ರೂ. ಹೆಚ್ಚಳವಾದಂತಾಗಿದ್ದು, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಮೂಲಕ ಬಿಜೆಪಿ ಸರ್ಕಾರ ಮಧ್ಯಮ ವರ್ಗ, ಬಡವರು ಮತ್ತು ಗೃಹಿಣಿಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹಾಕಿದೆ. ಅಡುಗೆ ಮನೆ ಪ್ರತಿ ಕುಟುಂಬದ ಜೀವನದ ಕೇಂದ್ರಬಿಂದು. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ನೇರ ಪರಿಣಾಮ ಮಹಿಳೆಯರು ನಿರ್ವಹಿಸುವ ಮನೆಯ ಬಜೆಟ್ ಮೇಲೆ ಬೀಳುತ್ತದೆ. ದಿನನಿತ್ಯದ ಖರ್ಚು ನಿಭಾಯಿಸಲು ಸಾಮಾನ್ಯ ಕುಟುಂಬಗಳು ಪರದಾಡುತ್ತಿರುವ ಸಂದರ್ಭದಲ್ಲಿ ಇಂತಹ ನಿರ್ಧಾರಗಳು ಜನವಿರೋಧಿ ಕ್ರಮಗಳಾಗಿವೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ 2014ರಲ್ಲಿ ಅಡುಗೆ ಅನಿಲದ ಬೆಲೆ ಕೈಗೆಟಕದ ಮಟ್ಟದಲ್ಲಿತ್ತು ಎಂದು ಹೇಳಿ ಅಧಿಕಾರಕ್ಕೆ ಬಂದವರು, ಇಂದು ಸಾಮಾನ್ಯ ಜನರ ಬದುಕನ್ನೇ ದುಬಾರಿಯನ್ನಾಗಿಸಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸುವ ಬದಲು ನಿರಂತರವಾಗಿ ಜನರ ಮೇಲೆ ಹೊರೆಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿ. ಕೇಂದ್ರ ಸರ್ಕಾರ ತಕ್ಷಣವೇ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆದು, ಸಾಮಾನ್ಯ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಬದಲು, ಅವರ ಹಿತಾಸಕ್ತಿಯನ್ನು ಕಾಪಾಡುವ ನೀತಿಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.