ಬೆಳಗಾವಿಯಲ್ಲಿ ಶನಿವಾರ ಪರಿಸರ ದಿನದಲ್ಲಿ ವೆಂಕಟೇಶ ಪ್ರಸಾದ ಸಸಿಗೆ ನೀರುಣಿಸಿದರು. ವಿಶ್ವಾಸ ವೈದ್ಯ, ಅವಿನಾಶ ಪೋತದಾ,ರ ಶ್ರೀನಿವಾಸ ಶಿವಣಗಿ, ವಿ.ಎನ್.ಪಾಟೀಲ ಇತರರಿದ್ದರು.
ಬೆಳಗಾವಿ : ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೇವಲ ಪುಸ್ತಕದ ಜ್ಞಾನ ಸಾಕಾಗುವುದಿಲ್ಲ. ಆಸಕ್ತಿ, ಛಲ, ಶಿಸ್ತು, ಪರಿಶ್ರಮ ಮತ್ತು ಬದ್ಧತೆ ಇದ್ದಾಗ ಮಾತ್ರ ಸಾಧನೆ ಸಾಧ್ಯ. ವೈದ್ಯ, ವಿಜ್ಞಾನಿ, ಇಂಜಿನಿಯರ್, ಕಲಾವಿದ, ಕ್ರೀಡಾಪಟು ಸೇರಿದಂತೆ ಯಾವುದೇ ಕ್ಷೇತ್ರ ಆಯ್ದುಕೊಂಡರೂ ಅದರಲ್ಲಿ ನಿಜವಾದ ಆಸಕ್ತಿ ಇರಬೇಕು ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ ಪ್ರಸಾದ ಹೇಳಿದರು.
ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ ಬಿ.ಕೆ. ಮಾಡೆಲ್ ಶಾಲೆಯ ಆವರಣದಲ್ಲಿ ಶನಿವಾರ ಜರುಗಿದ ಪರಿಸರ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೆಲವರು ಓದಿನಲ್ಲಿ ಹೆಚ್ಚು ಅಂಕ ಗಳಿಸದಿದ್ದರೂ ತಮ್ಮ ಬಲ ಗುರುತಿಸಿಕೊಂಡು ಅಪ್ರತಿಮ ಸಾಧನೆ ಮಾಡಿದ್ದಾರೆ. ಆದರೆ, ಅದನ್ನೇ ನೆಪ ಮಾಡಿಕೊಂಡು ಓದು ನಿರ್ಲಕ್ಷಿಸುವುದು ಸರಿಯಲ್ಲ. ಪ್ರತಿಯೊಬ್ಬರೂ ತಮ್ಮ ಬಲ ಹಾಗೂ ದುರ್ಬಲತೆಗಳನ್ನು ಅರಿತುಕೊಳ್ಳಬೇಕು ಎಂದರು.
ಒಂದು ಕೌಶಲದಲ್ಲಿ ಪರಿಣತಿ ಪಡೆಯಲು ಸಾವಿರಾರೂ ಸಲ ಅಭ್ಯಾಸ ಮಾಡಬೇಕು. ಕ್ರಿಕೆಟ್‌ನಲ್ಲಿ ಒಂದು ಚೆಂಡು, ಒಂದು ಶಾಟ್ ಅಥವಾ ಒಂದು ಕೌಶಲಕ್ಕೆ ಮತ್ತೆ ಮತ್ತೆ ಅಭ್ಯಾಸ ಮಾಡಿದಾಗ ಮಾತ್ರ ಪರಿಪೂರ್ಣತೆ ಬರುತ್ತದೆ. ಕ್ರಿಕೆಟ್‌ನಲ್ಲಿ ಗೆಲುವು ಒಬ್ಬ ಆಟಗಾರನ ಸಾಧನೆ ಅಲ್ಲ. ಆಡದ 11ರ ನಂತರದ ಆಟಗಾರನೂ ತಂಡ ಬೆಂಬಲಿಸಿದಾಗ ಮಾತ್ರ ಗೆಲುವು ಸಿಗುತ್ತದೆ. ಜೀವನದಲ್ಲೂ ಕೆಲ ಗೆಲುವುಗಳಿಗೆ ತಂಡವಾಗಿ ಕೆಲಸ ಮಾಡುವುದು ಅವಶ್ಯವಾಗಿರುತ್ತದೆ ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಬೇಕು. ಯಾವ ಕೆಲಸವನ್ನೇ ಮಾಡಿದರೂ ಭಕ್ತಿಯಿಂದ, ಪ್ರಾಮಾಣಿಕತೆಯಿಂದ ಮಾಡಿದರೆ ಗುರಿ ಸಾಧನೆ ಸಾಧ್ಯ ಎಂದು ಹೇಳಿದರು.
ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆ ಧರ್ಮದರ್ಶಿ ವಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ವಿಲಾಸ ಜೋಶಿ, ಬಿಇ ಸೊಸೈಟಿ ಅಧ್ಯಕ್ಷ ಅವಿನಾಶ ಪೋತದಾರ, ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ದೀಪಾ ಹಂಜಿ, ಮಧುಕರ ತೇರದಾಳ, ಸುಧನ್ವಾ ಹುಕ್ಕೇರಿ ಇತರರಿದ್ದರು.