ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಡಾ.ವರ್ಷಾ ಪಾಟೀಲ ಮಾತನಾಡಿದರು. ಯಶೋವರ್ಧನ ಬಾರಾಮತಿಕರ, ವಿವೇಕ ಸಿದ್ಧ, ಸುರೇಶ ವಾಸೆದಾರ, ರಾಮಚಂದ್ರ ಕಟ್ಟಿ ಇದ್ದಾರೆ. 
ಬೆಳಗಾವಿ

ಕನ್ಹೇರಿ ಮಠದಲ್ಲಿ 31ರಿಂದ ಕರಕುಶಲ ಮಹಾಕುಂಭ

ಬೆಳಗಾವಿ: ಕೊಲ್ಲಾಪುರ ಜಿಲ್ಲೆಯ ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದಲ್ಲಿ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವಾಲಯ ಸಹಯೋಗದಲ್ಲಿ ಮಾ.31ರಿಂದ ಏ.4ರವರೆಗೆ ‘ಸಿದ್ಧಗಿರಿ ಕರಕುಶಲ ಮಹಾಕುಂಭ’ ಏರ್ಪಡಿಸಲಾಗಿದ್ದು, 17 ರಾಜ್ಯಗಳಿಂದ 200ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ ಎಂದು ಆಯೋಜನ ಸಮಿತಿಯ ಪ್ರತಿನಿ ಡಾ.ವರ್ಷಾ ಪಾಟೀಲ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ದೇಶದ ಸಾಂಪ್ರದಾಯಿಕ, ಕರಕುಶಲ ಮತ್ತು ಕಲೆಗೆ ಸಂಬಂಸಿದ ಕಲಾವಿದರು, ತಮ್ಮ ಕೌಶಲವನ್ನು ಪ್ರಸ್ತುತಪಡಿಸಲು ಅವಕಾಶ ನೀಡಲಾಗಿದೆ. ಸ್ಥಳದಲ್ಲೇ ತಯಾರಾಗುವ ಕಲಾತ್ಮಕ ಮತ್ತು ಆಕರ್ಷಕ ಕರಕುಶಲ ವಸ್ತುಗಳ ಮಾರಾಟಕ್ಕೂ ಅವಕಾಶ ನೀಡಲಾಗಿದೆ ಎಂದರು.
ಮಠದ ಕಾರ್ಯನಿರ್ವಾಹಕ ನಿರ್ದೇಶಕ ಯಶೋವರ್ಧನ ಬಾರಾಮತಿಕರ ಮಾತನಾಡಿ, ಟೆರ‌್ರಾಕೋಟಾ, ಜೇಡಿಮಣ್ಣಿನ ಆಭರಣ ಮತ್ತು ಆಟಿಕೆ, ಟ್ಯಾನಿಂಗ್ ಮರದ ಕಲೆ, ಬಿದಿರಿನ ಉತ್ಪನ್ನ, ಚರ್ಮೋದ್ಯಮ, ವಿವಿಧ ರಾಜ್ಯಗಳ ಕಸೂತಿ ಕಲೆ, ಪಿಂಗುಲಿ ಚಿತ್ರಕಲೆ, ಬುಡಕಟ್ಟು ಸಮುದಾಯದ ವಿವಿಧ ಕಲೆ ಮತ್ತು ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಗೊಂಬೆ, ಮಾದರಿ ವಿಗ್ರಹಗಳು, ಶಿಲ್ಪಕಲೆ, ಗಾಜಿನ ಕಲೆಯ ವಸ್ತುಗಳ ಜತೆಗೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಬಟ್ಟೆ, ಸೀರೆಗಳು ಮಹಾಕುಂಭದಲ್ಲಿ ಇರಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವೇಕ ಸಿದ್ಧ, ಸುರೇಶ ವಾಸೆದಾರ, ರಾಮಚಂದ್ರ ಕಟ್ಟಿ ಇದ್ದರು.