ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಫ.ಗು.ಹಳಕಟ್ಟಿ ಜಯಂತಿಯಲ್ಲಿ ವಚನ ಕಂಠ ಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಾಗ್ದೇವಿ ತಾಯಿ, ಈರಣ್ಣ ದೇಯನ್ನವರ, ಮಹಾಂತೇಶ ತೋರಣಗಟ್ಟಿ, ಕುಮದಿನಿ ತಾಯಿ ಇತರರಿದ್ದರು.
ಬೆಳಗಾವಿ: ಶರಣರ ವಚನಗಳನ್ನು ಒಗ್ಗೂಡಿಸಿ, ಸಂರಕ್ಷಿಸುವ ಜತೆಗೆ ಅವುಗಳಿಗೆ ಪುಸ್ತಕ ರೂಪ ನೀಡಿ ಜಗತ್ತಿನಲ್ಲೆಡೆ ಪ್ರಸರಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಬಸವ ತತ್ತ್ವ ಅನುಭಾವ ಕೇಂದ್ರದ ವಾಗ್ದೇವಿತಾಯಿ ಹೇಳಿದರು.
ಲಿಂಗಾಯತ ಸಂಘಟನೆಯಿಂದ ಭಾನುವಾರ ಹಳಕಟ್ಟಿ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಜಯಂತ್ಯುತ್ಸವ ಮತ್ತು ವಚನ ಕಂಠಪಾಠ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಚನ ಸಾಹಿತ್ಯ ಜಗತ್ತಿನ ಎಲ್ಲ ಸಾಹಿತ್ಯಕ್ಕೂ ಮಿಗಿಲಾಗಿ ನಿಲ್ಲುತ್ತದೆ. ಪ್ರಕೃತಿಯಲ್ಲಿ ನಾನು ಎನ್ನುವುದು ಅಹಂ. ನಾನು ನನ್ನದು ಎಂಬುದು ಹೋಗಬೇಕು. ಶಕ್ತಿ ನೋಡಲು ಸಿಗುವುದಿಲ್ಲ. ಸೃಷ್ಟಿಯಲ್ಲೂ ಶಕ್ತಿ ಇದೆ. ಹಾಗೆ ಹಳಕಟ್ಟಿ ಅವರು ಅತ್ಯುನ್ನತ ಸ್ಥಾನದಲ್ಲಿದ್ದರೂ ಸ್ವಾರ್ಥಕ್ಕಾಗಿ ಏನೂ ಮಾಡಲಿಲ್ಲ. ವಚನ ಸಾಹಿತ್ಯವನ್ನು ಪಸರಿಸಿದರು ಎಂದು ಶ್ಲಾಘಿಸಿದರು.
ಬಸವ ತತ್ತ್ವ ಅನುಭಾವ ಕೇಂದ್ರ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ಚೆನ್ನಪ್ಪ ನರಸಣ್ಣವರ ಪ್ರಥಮ, ಸರಸ್ವತಿ ಯಡಾಲ ದ್ವಿತೀಯ, ಸಂಕೇತ ಮೇಟಿ ತೃತೀಯ ಹಾಗೂ ಶಕುಂತಲಾ ನರಸಣ್ಣವರ ಪ್ರೋತ್ಸಾಹಕರ ಬಹುಮಾನ ಪಡೆದರು.
ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ತೋರಣಗಟ್ಟಿ, ಕುಮದಿನಿ ತಾಯಿ, ಶಂಕರ ಗುಡಸ, ವಿರೂಪಾಕ್ಷ ದೊಡ್ಡಮನಿ, ಸದಾಶಿವ ದೇವರಮನಿ, ಮಹಾಂತೇಶ ಮೆಣಸಿನಕಾಯಿ, ಶಂಕರ ಗುಡಗನಟ್ಟಿ, ಶಿವಾನಂದ ನಾಯಕ, ಡಾ.ಅ.ಬ.ಇಟಗಿ, ಶಿವಾನಂದ ತಲ್ಲೂರ, ವಿರೂಪಾಕ್ಷಿ ಹಿಡದುಗ್ಗಿ, ಅಕ್ಕಮಹಾದೇವಿ ತೆಗ್ಗಿ, ಆನಂದ ಕರ್ಕಿ ಇತರರಿದ್ದರು. ಮಹಾದೇವಿ ಅರಳಿ ಪ್ರಾರ್ಥಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.