ನಂದಗಾಂವದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಗುಮಟಿ ಉದ್ಘಾಟಿಸಿದರು. ಓಂಕಾರೆಪ್ಪ ಅಜ್ಜ, ಬೀರಪ್ಪ ಇಚೇರಿ, ದಿಲೀಪ ಕಾಂಬಳೆ ಇತರರಿದ್ದರು.
ಅಥಣಿ ಗ್ರಾಮೀಣ: ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೇ, ಶಿಕ್ಷಿಸದೇ ಪಾಠ ಮಾಡುವುದು ಬೇಸರದ ಸಂಗತಿ ಎಂದು ಬಬಲಾದಿ ಸದಾಶಿವ ಮುತ್ಯಾನಮಠದ ಓಂಕಾರೆಪ್ಪ ಅಜ್ಜ ಹೇಳಿದರು.
ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳನ್ನು ಬಾಲ್ಯದಲ್ಲಿ ತಿದ್ದದೇ ಕಲಿಸುವುದು ನಿಜವಾದ ಶಿಕ್ಷಣ ಅಲ್ಲ. ಅವರ ಬದುಕು ಹಸನಾಗಲಿ ಎಂದು ಶಿಕ್ಷಕರು ದಂಡಿಸುತ್ತಾರೆ. ಆದರೆ, ಇಂದು ಶಿಕ್ಷಕರು ಮಕ್ಕಳಿಗೆ ದಂಡಿಸಿದರೆ ಪಾಲಕರು ಪ್ರಶ್ನೆ ಮಾಡುತ್ತಿರುವುದರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅವರ ಶಿಕ್ಷಣಮಟ್ಟ ವೃದ್ಧಿಯಾಗಲು ಹಾಗೂ ಉನ್ನತ ಸ್ಥಾನ ಗಳಿಸಲು ಗುರುಗಳ ಮಾರ್ಗದರ್ಶನದ ಜತೆಗೆ ಶಿಕ್ಷಣ ಅವಶ್ಯ ಎಂದು ತಿಳಿಸಿದರು.
ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಗುಮಟಿ ಮಾತನಾಡಿ, ಪ್ರತಿಯೊಬ್ಬರೂ ಗುರು ಹಾಗೂ ಪಾಲಕರ ಋಣ ತೀರಿಸಬೇಕು ಎಂದು ಕರೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಬೀರಪ್ಪ ಇಚೇರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸುರೇಶ ಇಚೇರಿ, ಮಹೇಶ ಮದಗೌಡ, ಮಂಜು ಕೋಳಿ, ಚಿದಾನಂದ ಬಡಿಗೇರ, ರವಿ ಮಿರ್ಜಿ, ಸತ್ಯಪ್ಪ ಬಾಗೇನ್ನವರ, ದಿಲೀಪ ಕಾಂಬಳೆ, ಸಿದ್ದಣ್ಣ ಪಾಟೀಲ, ದವಾಲ್ ಮುಲ್ಲಾ, ಶ್ರೀಕಾಂತ ನಂದೇಶ್ವರ, ಅಣ್ಣಪ್ಪ ಕಾತ್ರಾಳ ಇತರರಿದ್ದರು.