ಬೆಳಗಾವಿಯಲ್ಲಿ ಬುಧವಾರ ಪ್ರವಚನಕಾರ ಶಂಕರ ಬಾಂದಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶೈಲೇಶ ಶಿರೋಡಕರ, ಸತೀಶ ಬೆಕವಾಡಕರ, ದೀಪಕ ಬಿರ್ಜೆ
ಜೀವನ ವಿದ್ಯಾ ಮಿಷನ್ ಹಾಗೂ ಜ್ಞಾನಸಾಧನ ಕೇಂದ್ರದಿಂದ ಈ ಸಲದ ಗುರುಪೂರ್ಣಿಮೆ ಮಹೋತ್ಸವದ ಪ್ರಯುಕ್ತ ಆ.9ರಂದು ಮರಾಠ ಮಂದಿರದಲ್ಲಿ ಕೃತಜ್ಞತಾ ದಿನ ಆಯೋಜಿಸಲಾಗಿದೆ. ಇದರಲ್ಲಿ ತತ್ತ್ವಜ್ಞಾನಿ ವಾಮನರಾವ್ ಪೈ ಸುಪುತ್ರ ಚಿಂತಕ ಪ್ರಹ್ಲಾದ ಪೈ ‘ಕೃತಜ್ಞತೆಯೇ ನಿಜವಾದ ಆರಾಧನೆ’ ವಿಷಯವಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರವಚನಕಾರ ಶಂಕರ ಬಾಂದಕರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹೋತ್ಸವದ ಪ್ರಯುಕ್ತ ಒಟ್ಟು ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹೋತ್ಸವದ ಮುನ್ನಾದಿನ ಆ.8ರಂದು ಬೆಳಗಾವಿ ಹಾಗೂ ಕೊಲ್ಲಾಪುರ, ಗಡಹಿಂಗ್ಲಜ್ ಮತ್ತು ಗೋವಾದಿಂದ ಆಗಮಿಸುವ ನಾಮಧಾರಿಗಳು ವಿಶೇಷ ಸಭೆ ನಡೆಸುವರು. ಭಾನುವಾರ ಮಹೋತ್ಸವ ಹಾಗೂ ಆ.10ರಂದು ಪ್ರಹ್ಲಾದ ಪೈ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.
ಭಾನುವಾರ ಮುಖ್ಯ ಮಹೋತ್ಸವದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಸಂಗೀತ, ಗುರುಪೂಜೆ ಹಾಗೂ ಮಾರ್ಗದರ್ಶನ, ಮಧ್ಯಾಹ್ನ 12ಕ್ಕೆ ಪ್ರಹ್ಲಾದ ಪೈ ವಿಶೇಷ ಪ್ರವಚನ ಜರುಗುವುದು. ಇದರಲ್ಲಿ ನಾಮಧಾರಕರು ಮಾತ್ರವಲ್ಲದೇ ವಿವಿಧ ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಳ್ಳಬಹುದು. ಜೀವನ ವಿದ್ಯಾ ಮಿಷನ್ ಈವರೆಗೆ ಸಂಸ್ಕಾರ ಶಿಕ್ಷಣ, ವ್ಯಸನಮುಕ್ತಿ, ಸ್ವಚ್ಛತೆ, ಅಂಧಶ್ರದ್ಧೆ ನಿರ್ಮೂಲನೆ, ರಕ್ತದಾನ, ವಿದ್ಯಾರ್ಥಿ ಮಾರ್ಗದರ್ಶನ ಹಾಗೂ ಗ್ರಾಮ ಸಮೃದ್ಧಿ ಅಭಿಯಾನಗಳನ್ನು ಕೈಗೊಂಡಿದೆ. ಇದರ ಅವಲೋಕನವೂ ಈ ಮಹೋತ್ಸವದಲ್ಲಿ ಜರುಗಲಿದೆ ಎಂದು ಮಾಹಿತಿ ನೀಡಿದರು.
ಶೈಲೇಶ ಶಿರೋಡಕರ, ಸತೀಶ ಬೆಕವಾಡಕರ, ದೀಪಕ ಬಿರ್ಜೆ ಸುದ್ದಿಗೋಷ್ಠಿಯಲ್ಲಿದ್ದರು.