ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ಎಂ.ಜಾನಕಿ. ಲೀಲಾವತಿ ಹಿರೇಮಠ, ಭರಮಣ್ಣ ಉಪ್ಪಾರ, ವಾಯ್.ಜೆ.ಭಜಂತ್ರಿ ಇತರರಿದ್ದರು.
ಬೆಳಗಾವಿ: ತಂದೆ-ತಾಯಿಯ ನಂತರ ಯಾವುದೇ ವೃತ್ತಿ ಅಥವಾ ಜ್ಞಾನವನ್ನು ಕಲಿಯಲು ಗುರುಗಳ ಮಾರ್ಗದರ್ಶನ ಅತ್ಯಗತ್ಯವಾಗಿದ್ದು ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯದ ಬೆಳಕು ಎಂದು ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನ,ಬೆಳಗಾವಿ ಶೈಕ್ಷಣಿಕ ಜಿಲ್ಲಾ ಮಟ್ಟದ ಹಾಗೂ ನಗರ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ,ಕ್ರೀಡಾ ಕೂಟಗಳ ಸಮಾರಂಭ ಉದ್ಘಾಟಿಸಿ ಮಾತನಾಡಿ,ಶಿಕ್ಷಕರು ವಿದ್ಯಾರ್ಥಿಗಳ ಬದುಕಿನಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ನಮಗೆ ತಿಳಿಯದ ಜಗತ್ತನ್ನು ಪರಿಚಯಿಸಿ, ಜ್ಞಾನವನ್ನು ಹಂಚಿ, ಜೀವನದ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸುವವರು ಶಿಕ್ಷಕರು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುವಿನ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಪರಿಶ್ರಮ ಅಡಗಿರುತ್ತದೆ. ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಅವರ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ಮಾರ್ಗದರ್ಶನ ನೀಡಿದಾಗ ಅವರ ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳ ಭವಿಷ್ಯ ್ಯವನ್ನು ರೂಪಿಸುವಲ್ಲಿ ತಂದೆ ತಾಯಿಯರ ಪಾತ್ರ ಎಷ್ಟು ಮಹತ್ವದ್ದೋ, ಶಿಕ್ಷಣದ ಹಂತದಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲಿಲಾವತಿ ಹೀರೆಮಠ ಮಾತನಾಡಿ, ಶಿಕ್ಷಕರು ಮೂಲತಃ ಪ್ರತಿ ಕ್ಷಣವೂ ಸಾಮಾಜಿಕ ಕಾರ್ಯ ಮುಖಿಗಳಾಗಿರಬೇಕು. ಸರ್ವಪಲ್ಲಿ ರಾಧಾಕೃಷ್ಣ ಅವರ ಮಾತನ್ನು ಉಲ್ಲೇಖಿಸುತ್ತಾ, ವರ್ಗಕೋಣೆಯಲ್ಲಿಯೇ ರಾಷ್ಟ್ರ ನಿರ್ಮಾಣವಾಗುತ್ತದೆ.ಬೆಳಗಾವಿ ಜಿಲ್ಲೆಯು ಶೈಕ್ಷಣಿಕವಾಗಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದರು.
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಬೆಳಗಾವಿ ವಿಭಾಗದ ಪದ ನಿಮಿತ್ತ ಸಹ ನಿರ್ದೇಶಕ ಜಿ.ಎಂ ವೃಷಬೇಂದ್ರಯ್ಯ,ಬಿಇಒ ವಾಯ್. ಜೆ. ಭಜಂತ್ರಿ, ಡಯಟ್ ಉಪ ನಿರ್ದೇಶಕ ಯು.ಡಿ ಹುನಕುಪ್ಪಿ, ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ರಾಯವ್ವಗೋಳ, ಇತರರಿದ್ದರು.