ಬೆಳಗಾವಿ ನಗರದ ಎಪಿಎಂಸಿ ಠಾಣೆ ಪೊಲೀಸರು ಮನೆಗಳ್ಳರಿಂದ ಎರಡು ಬೈಕ್, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 
ಬೆಳಗಾವಿ

ಎಪಿಎಂಸಿ ಠಾಣೆ ಪೊಲೀಸರ ಭರ್ಜರಿ ಕಾರ್ಯಚರಣೆ

ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿ 4.71 ಲಕ್ಷ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದ ದೇವೇಂದ್ರ ವಾಘಮೋರೆ, ಸಚಿನ ಗೌಳಿ, ಕೊಲ್ಹಾಪುರ ಜಿಲ್ಲೆಯ ಹಾತಕಣಗಲಾ ತಾಲ್ಲೂಕಿನ ರೂಯಿಯ ಕಪಿಲ ಜಾಧವ ಬಂಧಿತರು. ಮೇ 3ರಂದು ದಾಖಲಾಗಿದ್ದ ಮನೆಗಳ್ಳತನ ಪ್ರಕರಣ ಭೇದಿಸಿರುವ ಎಪಿಎಂಸಿ ಠಾಣೆ ಪೊಲೀಸರು ಬಂಧಿತರಿಂದ 1.67 ಲಕ್ಷ ರೂ.ಮೌಲ್ಯದ 12.08 ಗ್ರಾಂ ಚಿನ್ನಾಭರಣ, 1.83 ಲಕ್ಷ ರೂ.ಮೌಲ್ಯದ 744 ಗ್ರಾಂ ಬೆಳ್ಳಿ ಆಭರಣ, ಎರಡು ಬೈಕ್ ಸೇರಿ ಒಟ್ಟು 4.71 ಲಕ್ಷ ರೂ.ಮೌಲ್ಯದ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್: ಒಬ್ಬನ ಬಂಧನ
ನಗರದ ಹಳೇ ಸಗಟು ತರಕಾರಿ ಮಾರುಕಟ್ಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಆನ್‌ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಖಂಜರ್ ಗಲ್ಲಿಯ ಜಹೀರ್ ಮುಜಾವರ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ ಮೊಬೈಲ್ ಸೇರಿ 2,600 ರೂ.ನಗದು ವಶಪಡಿಸಿಕೊಂಡಿದ್ದಾರೆ.
ಗಾಂಜಾಮಾರಾಟ: ಒಬ್ಬನ ಬಂಧನ
ನಗರದ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಒಬ್ಬನನ್ನು ಖಡೇ ಬಜಾರ್ ಠಾಣೆ ಪೊಲೀಸರು ಹರ್ಷಾ ವರ್ಮಾ ಬಂಧಿಸಿ 5 ಸಾವಿರ ರೂ.ಮೌಲ್ಯದ 272 ಗ್ರಾಂ ಗಾಂಜಾ, ಮೊಬೈಲ್, ನಗರ ಜಪ್ತಿ ಮಾಡಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಗಾಂಜಾ ಸೇವಿಸುತ್ತಿದ್ದ ಅದೇ ಗ್ರಾಮದ ಕಿರಣ ಹೊಳೆಪ್ಪನವರ ಎಂಬಾತನನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.