ಡಾ.ಪ್ರಭಾಕರ ಕೋರೆಯವರೊಂದಿಗೆ ಮಹಾಂತೇಶ ಕವಟಗಿಮಠ.
ಬೆಳಗಾವಿ: ಏಳು ಜನ ಆದರ್ಶ ಶಿಕ್ಷಕರ ಪರಿಶ್ರಮದಿಂ ಸ್ಥಾಪನೆಗೊಂಡ ಕೆಎಲ್‌ಇ ಸಂಸ್ಥೆಯ ಆಶಯದಂತೆ ಸಂಸ್ಥೆಯನ್ನು ಜಾಗತಿಕ ನೆಲೆಯಲ್ಲಿ ವಿಸ್ತರಿಸಿದ ಸಾಧಕ ಡಾ.ಪ್ರಭಾಕರ ಕೋರೆ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿರುವುದು ಸಂಸ್ಥೆಯ ಹಿರಿಮೆ ಹೆಚ್ಚಿಸಿದೆ ಎಂದು ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ, ವೈದ್ಯಕೀಯ, ಆರೋಗ್ಯ, ಕೃಷಿ, ಸಂಶೋಧನೆ, ತಂತ್ರಜ್ಞಾನ, ಕಾನೂನು, ವ್ಯವಹಾರ, ಸಹಕಾರ, ಸಾಂಸ್ಕೃತಿಕ ವಲಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ.ಬಹುಮುಖ ವ್ಯಕ್ತಿತ್ವದೊಂದಿಗೆ ಸಮಾಜಮುಖಿಯಾಗಿ ಸಲ್ಲಿಸಿದ ಸೇವೆ, ಅನ್ವೇಷಣೆಗಳ ಮೂಲಕ ಬಡವರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಕಲ್ಪಿಸಿದವರು. ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಕಾರಣದಿಂದ ಗ್ರಾಮೀಣ ಪ್ರತಿಭೆಗಳು ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ, ಫಿಜಿಯೋಥೆರಪಿ, ದಂತ ಶಾಸ್ತ್ರ, ಭೌತಿಕ ಶಾಸ್ತ್ರ, ಫಾರ್ಮಸಿ, ನರ್ಸಿಂಗ್ ಜತೆಗೆ ಅಸಂಖ್ಯ ಅಲೈಡ್ ಕೋರ್ಸ್‌ಗಳನ್ನು ನವಯುಗಕ್ಕೆ ಕಲ್ಪಿಸಿಕೊಟ್ಟವರು. ತಾಂತ್ರಿಕ ಶಿಕ್ಷಣದಲ್ಲಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ, ಐಟಿಐ, ಡಿಪ್ಲೊಮಾ ಮೊದಲಾದ ವೈವಿಧ್ಯಮಯ ಶಿಕ್ಷಣಕ್ಕೆ ದಾರಿ ಮಾಡಿದವರು. ಇದೆಲ್ಲದರ ಪ್ರತಿಫಲವಾಗಿ ಸಾವಿರಾರು ತಂತ್ರಜ್ಞರು ಇಂದು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಶ್ಲಾಘಿಸಿದರು.
ಬೆಳಗಾವಿಯಲ್ಲಿ ಕೆಎಲ್ಇ ವೈದ್ಯಕೀಯ ವಿವಿ, ಹುಬ್ಬಳ್ಳಿಯಲ್ಲಿ ತಾಂತ್ರಿಕ ವಿವಿ ಮೂಲಕ ಮಹತ್ವದ ಕೊಡುಗೆ ನೀಡಿರುವ ಅವರು, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆ ನಿರ್ಮಾಣದ ರೂವಾರಿಯಾಗಿದ್ದಾರೆ. ಈಚೆಗೆ ಬಿಎಸ್ಸಿ ಅಗ್ರಿ ಕಾಲೇಜು ಪ್ರಾರಂಭಿಸಿರುವುದು ಅವರ ಕೃಷಿ ಕಾಳಜಿಗೆ ಸಾಕ್ಷಿ. ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸಿದ ಅವರ ಸೇವೆ ಅಪಾರ. ರಾಜಕೀಯ ಕ್ಷೇತ್ರದಲ್ಲಿ
ಪ್ರಶ್ನಾತೀತ ನಾಯಕರಾಗಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರನ್ನು ಬೆಳಗಾವಿಗೆ ಕರೆ ತಂದಿದ್ದಾರೆ. ಗಡಿ ಭಾಗದಲ್ಲಿ ಸಹಕಾರ ವಲಯವನ್ನು ಬಲಪಡಿಸಿದ ಅನನ್ಯ ಸಾಧಕ ಡಾ.ಕೋರೆ ಅವರು ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾಗಿರುವುದು ಸಮಸ್ತ ನಾಡಿಗೆ ಅಭಿಮಾನ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.