ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಬೆಳಗಾವಿ :ಸವದತ್ತಿ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿಗಾಗಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದ್ದ ಯೋಜನೆಗೆ 215 ಕೋಟಿರೂ. ಬಿಡುಗಡೆಯಾಗಿದ್ದು, ಫೆ.15ರಿಂದ 20ರ ಮಧ್ಯೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಬಿಡುಗಡೆಯಾಗಿರುವ ಅನುದಾನದಲ್ಲಿ ಕೇಂದ್ರ ಸರ್ಕಾರದ 118 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ ಪಾಲು 97 ಕೋಟಿ ರೂ. ಇದೆ. ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆಯನ್ನು ಎಕ್ಸಿಕ್ಲೂಟಿವ್ ಏಜೆನ್ಸಿ ಮಾಡಿದ್ದೇವೆ. ಈಗಾಗಲೇ ಟೆಂಡರ್ ಆಕರಿಸಲಾಗುತ್ತಿದ್ದು, ಜನ. 30ಕ್ಕೆ ಕೊನೆಯ ದಿನವಿದೆ. ಇದಾದ ಬಳಿಕ ಶೀಘ್ರ ಟೆಂಡರ್ ಕರೆದು, ಶಂಕುಸ್ಥಾಪನೆ ನೆರವೇರಿಸುತ್ತೇವೆ ಎಂದರು.
ಯೋಜನೆಯಲ್ಲಿ 8 ಸಾವಿರ ಜನರಿಗೆ ವಸತಿ ಸಂಕೀರ್ಣ, 4 ಸಾವಿರ ಜನ ಏಕಕಾಲಕ್ಕೆ ಊಟ ಮಾಡಬಹುದಾದ ಅನ್ನದಾಸೋಹ ಭವನ, ಪಾರ್ಕಿಂಗ್ ಸ್ಥಳ ಅಭಿವೃದ್ಧಿ, ಚಕ್ಕಡಿಯಲ್ಲಿ ಬರುವ ರೈತರ ಜಾನುವಾರುಗಳಿಗಾಗಿ ಮೇವು ದಾಸೋಹ ಭವನ, 25 ಶೌಚಾಲಯ ಸಂಕೀರ್ಣ, ಆಡಳಿತ ಕಚೇರಿ ಸೇರಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.