ನಿಪ್ಪಾಣಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಾತನಾಡಿದರು. ಶಶಿಧರ, ಅರ್ಚನಾ ಇದ್ದರು.
ನಿಪ್ಪಾಣಿ: ತಾಲೂಕಿನ ಭೋಜ ಗ್ರಾಮದಲ್ಲಿ ಅಲೆಮಾರಿ ಜನಾಂಗವಿರುವ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗತಿ ಪರಿಶೀಲಿಸಲಾಯಿತು. ಅಲೆಮಾರಿ ಸಮುದಾಯದವರ ಕುಂದು-ಕೊರತೆ ಆಲಿಸಲಾಗಿದ್ದು, ಸ್ಥಳದಲ್ಲೇ ಓರ್ವ ಅಲೆಮಾರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದೊರಕಿಸಲಾಯಿತು. ಸೌಲಭ್ಯ ವಂಚಿತ ಎಲ್ಲರಿಗೂ ಸರ್ಕಾರದಿಂದ ಸೌಲಭ್ಯ ಒದಗಿಸಲಾಗುವುದು ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಗಮ ಮಂಡಳಿಯಿಂದ ದೊರೆಯುವ ಸೌಲಭ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕಂದಾಯ, ಶಿಕ್ಷಣ, ಕಾರ್ಮಿಕ, ಪೊಲೀಸ್, ಸಮಾಜ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕು ಮಟ್ಟದಲ್ಲಿ ಕುಂದು-ಕೊರತೆ ಸಭೆ ನಡೆಸಲಾಗುವುದು. ನ್ಯೂನತೆ ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಪ್ರತಿ ಗ್ರಾಪಂ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯದ ಕುಂದು-ಕೊರತೆ ಆಲಿಸಲು ಮತ್ತು ಜಾಗೃತಿ ಮೂಡಿಸಲು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕೆಂದು ನಿರ್ದೇಶಿಸಲಾಗಿದೆ. ನಿರ್ಲಕ್ಷ್ಯಮತ್ತು ಬೇಜವಾಬ್ದಾರಿ ತೋರದೆ ಅಲೆಮಾರಿ ಸಮುದಾಯಕ್ಕೆ ಸೌಲಭ್ಯ ನೀಡಬೇಕು. 30 ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲೆಮಾರಿಗಳಿಗೆ ನಿವೇಶನ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿವೇಶನರಹಿತ, ವಸತಿರಹಿತ ನಿರಾಶ್ರಿತರ, ಅಲೆಮಾರಿಗಳ ಪಟ್ಟಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಿಗಮ ಮಂಡಳದ ವಿಶೇಷ ಅಧಿಕಾರಿ ಶಶಿಧರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರ್ಚನಾ ಇತರರಿದ್ದರು.
ಬಜೆಟ್‌ನಲ್ಲಿ 100 ಕೋಟಿ ರೂ. ವಿಶೇಷ ಅನುದಾನ
ನಿವೇಶನರಹಿತ ಅಲೆಮಾರಿಗಳಿಗೆ ನಿಗಮದಿಂದ 2 ಲಕ್ಷ ರೂ. ಸಹಾಯ ಧನ ನೀಡಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಈ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂ. ವಿಶೇಷ ಅನುದಾನ ನಿಗದಿ ಮಾಡಿದ್ದಾರೆ. ಶಿಕ್ಷಣದಿಂದ ವಂಚಿತರಾಗಿದ್ದ ಅಲೆಮಾರಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಎಂಟು ಅಲೆಮಾರಿ ವಸತಿಸಹಿತ ಶಾಲೆಗಳ ಅನುಮೋದನೆಗೆ ಪ್ರಸ್ತಾಪಿಸಿದ್ದೆ. ಬಜೆಟ್‌ನಲ್ಲಿ ನಾಲ್ಕು ಶಾಲೆಗಳನ್ನು ಸರ್ಕಾರ ಅನುಮೋದಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ತಮ್ಮ ಇಲಾಖೆಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದರು.