ಬೆಳಗಾವಿ: ದೇಶದ ಗಡಿಯೊಳಗೆ ಹೋರಾಡುವ ಸೈನಿಕರಂತೆ ಸರ್ಕಾರಿ ನೌಕರರು ದೇಶದೊಳಗಿನ ಆಡಳಿತ ವ್ಯವಸ್ಥೆಯ ಗಣತಿ, ಚುನಾವಣೆ, ಪಲ್ಸ್ ಪೋಲಿಯೋ ಹಾಗೂ ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಪಾಲಿಕೆ ಆಯುಕ್ತ ಕಾರ್ತಿಕ ಎಂ. ಹೇಳಿದರು.
ಸರ್ಕಾರದ ಗಣತಿ ಕಾರ್ಯವನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ವಾರ ಮುಂಚಿತವಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರ ಗಣತಿ ಅಧಿಕಾರಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಗಣತಿ ಕಾರ್ಯವನ್ನು ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಿಬ್ಬಂದಿ ತಾಂತ್ರಿಕ ತೊಂದರೆ, ಬಿಸಿಲನ್ನೂ ಲೆಕ್ಕಿಸದೆ ಪರಸ್ಪರ ಸಹಕಾರದಿಂದ ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದು ಶ್ಲಾಘನೀಯ ಎಂದರು.
ನಗರ ಗಣತಿ ಅಧಿಕಾರಿ, ಉಪ ಆಯುಕ್ತ ಡಾ.ಸಿದ್ದು ಹುಲ್ಲೋಳಿ ಮಾತನಾಡಿ, ಗಣತಿಯಲ್ಲಿ 150 ಮೇಲ್ವಿಚಾರಕರು ಸೇರಿದಂತೆ 1,200 ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ತಲಾ 50ರ ಒಂದು ಬ್ಯಾಚ್ ಮಾಡಿ 3 ದಿನ 7 ಅಧಿಕಾರಿಗಳು ತರಬೇತಿ ನೀಡಿದ್ದಾರೆ.
ಏಳು ಜನ ಚಾರ್ಜ್ ಅಧಿಕಾರಿಗಳು ಮೇಲ್ವಿಚಾರಕರಾಗಿದ್ದರು. ಆಯುಕ್ತರ ಮಾರ್ಗದರ್ಶನ ಹಾಗೂ ಸಿಬ್ಬಂದಿ ಉತ್ತಮ ಸಯೋಜನೆಯಿಂದಾಗಿ ಈ ಕಾರ್ಯ ಯಶಸ್ವಿಯಾಗಿದೆ ಎಂದರು.