ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸಿದ ಪ್ರಮುಖ ಅಧಿಕಾರಿಗಳೊಂದಿಗೆ ಕಾರ್ತಿಕ ಎಂ., ಸಿದ್ದು ಹುಲ್ಲೊಳ್ಳಿ, ಉದಯಕುಮಾರ ತಳವಾರ ಇತರರಿದ್ದರು.
ಬೆಳಗಾವಿ: ದೇಶದ ಗಡಿಯೊಳಗೆ ಹೋರಾಡುವ ಸೈನಿಕರ ರೀತಿ ಸರ್ಕಾರಿ ನೌಕರರು ದೇಶದೊಳಗಿನ ಆಡಳಿತ ವ್ಯವಸ್ಥೆಯ ಗಣತಿ, ಚುನಾವಣೆ, ಪಲ್ಸ್ ಪೋಲಿಯೋ ಹಾಗೂ ತುರ್ತು ಸಂದರ್ಭಗಳಲ್ಲಿ ಯೋಧರಂತೆಯೇ ಕಾರ್ಯನಿರ್ವಹಿಸುತ್ತಾರೆ ಎಂದು ಪಾಲಿಕೆ ಆಯುಕ್ತ ಕಾರ್ತಿಕ ಎಂ. ಹೇಳಿದರು.
ಸರ್ಕಾರದ ಗಣತಿ ಕಾರ್ಯವನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ವಾರ ಮುಂಚಿತವಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಲ್ಲಿ ಸೋಮವಾರ ಗಣತಿ ಅಧಿಕಾರಿಗಳಿಗೆ ಅಭಿನಂದನಾ ಪತ್ರ ನೀಡಿ ಮಾತನಾಡಿದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಗಣತಿ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಿಬ್ಬಂದಿ ತಾಂತ್ರಿಕ ತೊಂದರೆ, ಬಿರುಬಿಸಿಲನ್ನೂ ಲೆಕ್ಕಿಸದೆ ಪರಸ್ಪರ ಸಹಕಾರದಿಂದ ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದು ಶ್ಲಾಘನೀಯ ಎಂದರು.
ನಗರ ಗಣತಿ ಅಧಿಕಾರಿ, ಉಪ ಆಯುಕ್ತ (ಕಂದಾಯ) ಡಾ.ಸಿದ್ದು ಹುಲ್ಲೋಳಿ ಮಾತನಾಡಿ, ಗಣತಿಯಲ್ಲಿ 150 ಮೇಲ್ವಿಚಾರಕರು ಸೇರಿದಂಎತ 1,200 ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ತಲಾ 50ರ ಒಂದು ಬ್ಯಾಚ್ ಮಾಡಿ 3 ದಿನಗಳ ಕಾಲ 7 ಅಧಿಕಾರಿಗಳು ತರಬೇತಿ ನೀಡಿದ್ದಾರೆ. ಏಳು ಜನ ಚಾರ್ಜ್ ಅಧಿಕಾರಿಗಳು ಮೇಲ್ವಿಚಾರಕರಾಗಿದ್ದರು. ಆಯುಕ್ತರ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಉತ್ತಮ ಸಯೋಜನೆಯಿಂದಾಗಿ ಈ ಕಾರ್ಯ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ತಳವಾರ, ಇತರರಿದ್ದರು.